ಗಡಿಪಾರು ಆದೇಶ ಹೊರಡಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಅಧಿಕಾರವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು - Mahanayaka
12:21 PM Sunday 6 - September 2026

ಗಡಿಪಾರು ಆದೇಶ ಹೊರಡಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಅಧಿಕಾರವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

high court
05/09/2026

ಬೆಂಗಳೂರು: ಆರೋಪಿಗಳನ್ನು ಗಡಿಪಾರು ಮಾಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ಯಾವುದೇ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಎಸ್​​ ಪಿಗಳಿಗೆ ಈ ಅಧಿಕಾರ ನೀಡಿ ರಾಜ್ಯ ಸರ್ಕಾರ 2025ರ ನವೆಂಬರ್ 18ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೊರಡಿಸಿದ್ದ ಗಡಿಪಾರು ಆದೇಶವನ್ನು ಪ್ರಶ್ನಿಸಿ ಚಂದ್ರಕಾಂತ್‌ ಶಂಕರ್‌ ವಡ್ಡರ್‌ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಅಪರಾಧ ಎಸಗುವ ಸಾಧ್ಯತೆಯಿರುವ ಹಾಗೂ ಈಗಾಗಲೇ ಕೆಲ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 55 ಮತ್ತು 56ರ ಅಡಿ ಗಡಿಪಾರು ಮಾಡಬಹುದು. ಆದರೆ, ಬೆಂಗಳೂರು ಮತ್ತು ಇತರ ಕಮಿಷನರೇಟ್​ ಗಳಲ್ಲಿ ಪೊಲೀಸ್ ಕಮಿಷನರ್​ಗಳು ಮಾತ್ರ ಸಮರ್ಥ ಪ್ರಾಧಿಕಾರವಾಗಿದ್ದಾರೆ. ಇನ್ನುಳಿದ ಪ್ರದೇಶಗಳಲ್ಲಿ ಸರ್ಕಾರವು ಅಧಿಸೂಚನೆ ಮೂಲಕ ಜಿಲ್ಲಾಧಿಕಾರಿ (ಡಿಎಂ) ಅಥವಾ ಉಪ ವಿಭಾಗಾಧಿಕಾರಿಗಳಿಗೆ (ಎಸಿ) ಮಾತ್ರ ಈ ಅಧಿಕಾರವಿರಲಿದೆ.

ಶಾಸನಸಭೆ ರೂಪಿಸಿದ ಶಾಸನಬದ್ಧ ಅವಕಾಶವನ್ನು ಕಾರ್ಯಾಂಗದ ಒಂದು ಅಧಿಸೂಚನೆಯ ಮೂಲಕ ವಿಸ್ತರಿಸಿ, ಕಾಯ್ದೆಯಲ್ಲಿ ಉಲ್ಲೇಖವಿಲ್ಲದ ಎಸ್​​ ಪಿಗೆ ಈ ಅಧಿಕಾರ ನೀಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಸಂಗೀತಾ ಸೂರ್ಯವಂಶಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ, ಸರ್ಕಾರದ ಸುತ್ತೋಲೆ ಅಥವಾ ಅಧಿಸೂಚನೆಗಳು ಮೂಲ ಕಾಯ್ದೆಯ ನಿಯಮಗಳ ವಿರುದ್ಧವಾಗಿರಲು ಅವಕಾಶವಿಲ್ಲ. ಆದ್ದರಿಂದ ಕಮಿಷನರ್, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಯಲ್ಲದ ಎಸ್​​ ಪಿಗೆ ಗಡಿಪಾರು ಆದೇಶ ಹೊರಡಿಸುವ ಅಧಿಕಾರವಿಲ್ಲ. ಎಸ್​​ ಪಿಗಳು ಹೊರಡಿಸುವ ಇಂತಹ ಆದೇಶಗಳು ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿರುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಿವಾಸಿ ಚಂದ್ರಕಾಂತ್ ಶಂಕರ್ ವಡ್ಡರ್ ಅವರನ್ನು ಬೆಳಗಾವಿ ಎಸ್​​ ಪಿ ಅವರು 2026ರ ಏಪ್ರಿಲ್ 28ರಂದು ಸೆಕ್ಷನ್ 55ರ ಅಡಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಕಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ, 2025ರ ನವೆಂಬರ್ 25ರ ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಗಡಿಪಾರು ಮಾಡುವ ಅಧಿಕಾರ ನೀಡಿದೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಇದನ್ನು ತಳ್ಳಿಹಾಕಿರುವ ಹೈಕೋರ್ಟ್, ಎಸ್‌ ಪಿಗಳಿಗೆ ಆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದಾಗ್ಯೂ, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಪ್ರಕಾರ ಕಾನೂನುಬದ್ಧವಾಗಿ ಅಧಿಕಾರ ಹೊಂದಿರುವ ಸೂಕ್ತ ಪ್ರಾಧಿಕಾರದಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲು ಈ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ಪೀಠ ತಿಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ