ಮಕ್ಕಳ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾದ ನಟ ಸೂರ್ಯ—ನಟಿ ಜ್ಯೋತಿಕಾ ದಂಪತಿ
ಕಾಲಿವುಡ್ ನ ಜನಪ್ರಿಯ ಸ್ಟಾರ್ ದಂಪತಿಗಳಾದ ಸೂರ್ಯ (Suriya) ಮತ್ತು ಜ್ಯೋತಿಕಾ (Jyotika) ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಭಿನ್ನ ಹಾಗೂ ರೋಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ. ತಮ್ಮ ದಾಂಪತ್ಯ ಜೀವನದ ಈ ಮಹತ್ವದ ಮೈಲಿಗಲ್ಲನ್ನು ಸ್ಮರಿಸಲು ಈ ಜೋಡಿ ವಿದೇಶದ ಚರ್ಚ್‌ನಲ್ಲಿ ಮತ್ತೊಮ್ಮೆ ಮದುವೆ ಪ್ರಮಾಣ ವಚನವನ್ನು (Vow Renewal) ಸ್ವೀಕರಿಸಿದೆ.
ತಮ್ಮ ಮಕ್ಕಳಾದ ದಿಯಾ ಮತ್ತು ದೇವ್ ಹಾಗೂ ಕುಟುಂಬದ ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಸುಂದರ ಸಮಾರಂಭ ನೆರವೇರಿದೆ. ಈ ವಿಶೇಷ ದಿನಕ್ಕಾಗಿ ಸೂರ್ಯ ಬಿಳಿ ಬಣ್ಣದ ಟಕ್ಸಿಡೋ ಸೂಟ್ ಧರಿಸಿದ್ದರೆ, ಜ್ಯೋತಿಕಾ ವೈಟ್ ವೆಡ್ಡಿಂಗ್ ಗೌನ್‌ನಲ್ಲಿ ಕಂಗೊಳಿಸಿದರು. ವಧುವಿನಂತೆ ಸಜ್ಜಾಗಿ ಬಂದ ಜ್ಯೋತಿಕಾವನ್ನು ನೋಡಿ ಸೂರ್ಯ ಭಾವುಕರಾದ ಕ್ಷಣಗಳು ಎಲ್ಲರಮನ ಸೆಳೆದಿವೆ. ಈ ಸುಂದರ ಸಮಾರಂಭದಲ್ಲಿ ಸೂರ್ಯ ಅವರ ಸಹೋದರ ಹಾಗೂ ನಟ ಕಾರ್ತಿ ಕೂಡ ಉಪಸ್ಥಿತರಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ದಂಪತಿ, ಇದನ್ನು ‘ದಿ ಸೀಕ್ವೆಲ್ — ಎ ವೌ ರಿನ್ಯೂವಲ್’ (The Sequel — A vow renewal) ಎಂದು ಕರೆದಿದ್ದಾರೆ. ಜ್ಯೋತಿಕಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಅತ್ಯಂತ ಭಾವುಕವಾಗಿ, “ಇದು ಯಾವುದೇ ಪರಿಪೂರ್ಣ ಮದುವೆಯ ಆಚರಣೆಯಲ್ಲ, ಬದಲಿಗೆ ನಮ್ಮ ನಡುವಿನ ಸಣ್ಣಪುಟ್ಟ ಕೊರತೆಗಳು, ಹೊಂದಾಣಿಕೆಗಳು, ಅರ್ಥಮಾಡಿಕೊಳ್ಳುವಿಕೆ, ತ್ಯಾಗ ಹಾಗೂ ಪರಸ್ಪರ ತೋರಿದ ನಿಸ್ವಾರ್ಥ ಪ್ರೀತಿಯ ಆಚರಣೆ. ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ನಾವು ಬೆಳೆದುಬಂದ ಹಾದಿಯ ಸಂಭ್ರಮವಿದು” ಎಂದು ಬರೆದುಕೊಂಡಿದ್ದಾರೆ.
ಜೊತೆಗೆ, ಮುಂದಿನ 20 ವರ್ಷಗಳ ತಮ್ಮ ಸುಂದರ ಪಯಣಕ್ಕಾಗಿ ಅವರು ಪರಸ್ಪರ ನೀಡಿದ ಮಾತುಗಳು ಮತ್ತು ಪ್ರತಿಜ್ಞೆಗಳು ಅಭಿಮಾನಿಗಳಲ್ಲಿ ಅಪಾರ ಭಾವುಕತೆ ಹಾಗೂ ಮೆಚ್ಚುಗೆಯನ್ನು ಮೂಡಿಸಿವೆ. ಸದ್ಯ ಈ ದಂಪತಿಯ ರೋಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























