ಯುದ್ಧ ವಿಮಾನ ಪತನ ವಿಚಾರ: ಮಾಹಿತಿಯ ಮೂಲ ತಿಳಿಸಿ, ಇಲ್ಲವಾದರೆ ಜೈಲಿಗೆ ಹೋಗಿ: ಅಮೆರಿಕ ಪತ್ರಕರ್ತರಿಗೆ ಟ್ರಂಪ್ ಬೆದರಿಕೆ
ವಾಷಿಂಗ್ಟನ್: ಇರಾನ್ನಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ವಿಮಾನ ಚಾಲಕನ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಗುಪ್ತ ಮಾಹಿತಿ ಸೋರಿಕೆ ಮಾಡಿರುವ ಮೂಲವನ್ನು ಬಹಿರಂಗಪಡಿಸದಿದ್ದರೆ ಪತ್ರಕರ್ತರನ್ನು ಜೈಲಿಗೆ ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ 4 ರಂದು ಇರಾನ್ನಲ್ಲಿ ಅಮೆರಿಕದ F–15E ಸ್ಟ್ರೈಕ್ ಈಗಲ್ ಯುದ್ಧ ವಿಮಾನ ಪತನಗೊಂಡಿತ್ತು. ಈ ವೇಳೆ ವಿಮಾನದಲ್ಲಿದ್ದ ಒಬ್ಬ ಅಧಿಕಾರಿ ನಾಪತ್ತೆಯಾಗಿದ್ದರು. ಬಳಿಕ ಸುಮಾರು 24 ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಅವರನ್ನು ರಕ್ಷಿಸಲಾಗಿತ್ತು. ಆದರೆ, ಈ ಕಾರ್ಯಾಚರಣೆಯ ಸೂಕ್ಷ್ಮ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿರುವುದು ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ.
ಸೋಮವಾರ ವೈಟ್ ಹೌಸ್ನಲ್ಲಿ ಮಾತನಾಡಿದ ಟ್ರಂಪ್, “ಮಾಹಿತಿ ಸೋರಿಕೆ ಮಾಡಿದ ಆ ಕಿಡಿಗೇಡಿಯನ್ನು ನಾವು ಪತ್ತೆ ಮಾಡುತ್ತೇವೆ. ಸಂಬಂಧಪಟ್ಟ ಮಾಧ್ಯಮ ಸಂಸ್ಥೆಗಳ ಬಳಿ ಹೋಗಿ ‘ಇದು ರಾಷ್ಟ್ರೀಯ ಭದ್ರತೆಯ ವಿಷಯ, ಮಾಹಿತಿಯ ಮೂಲವನ್ನು ತಿಳಿಸಿ ಇಲ್ಲವೇ ಜೈಲಿಗೆ ಹೋಗಿ’ ಎಂದು ಹೇಳುತ್ತೇವೆ,” ಎಂದು ಗುಡುಗಿದ್ದಾರೆ.
ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುವವರೆಗೂ ಅಮೆರಿಕದ ಅಧಿಕಾರಿ ನಾಪತ್ತೆಯಾಗಿರುವ ವಿಷಯ ಇರಾನ್ಗೆ ತಿಳಿದಿರಲಿಲ್ಲ. ವರದಿ ಪ್ರಕಟವಾದ ನಂತರ ಇರಾನ್ ಆತನನ್ನು ಸೆರೆಹಿಡಿಯಲು ಮುಂದಾಯಿತು, ಇದು ನಮ್ಮ ಅಧಿಕಾರಿಯ ಪ್ರಾಣಕ್ಕೆ ಅಪಾಯ ತಂದೊಡ್ಡಿತ್ತು ಎಂದು ಟ್ರಂಪ್ ಆರೋಪಿಸಿದ್ದಾರೆ.
ಪತ್ರಕರ್ತರನ್ನು ಜೈಲಿಗೆ ಕಳುಹಿಸುವ ಟ್ರಂಪ್ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಗುಪ್ತ ಮಾಹಿತಿಯನ್ನು ರಕ್ಷಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೇ ಹೊರತು ಮಾಧ್ಯಮಗಳದ್ದಲ್ಲ ಎಂದು ಪತ್ರಿಕಾ ಸ್ವಾತಂತ್ರ್ಯ ಪರ ಸಂಘಟನೆಗಳು ಪ್ರತಿಪಾದಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























