ಮೂಡಿಗೆರೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ — ಪತ್ರಕರ್ತ ರಾಘವೇಂದ್ರ ಕೆಸವಳಲು
ಮೂಡಿಗೆರೆ: ಕ್ರೀಡಾಪಟುಗಳು ಆಟೋಟಗಳಲ್ಲಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಹಾಗೂ ತೀರ್ಪುಗಾರರ ನಿರ್ಣಯಗಳಿಗೆ ಬದ್ಧರಾಗಿರಬೇಕು ಎಂದು ಪತ್ರಕರ್ತ ರಾಘವೇಂದ್ರ ಕೆಸವಳಲು ಕರೆ ನೀಡಿದ್ದಾರೆ.
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಮಗಳೂರು, ತಾಲೂಕು ಪಂಚಾಯತ್ ಮೂಡಿಗೆರೆ ಹಾಗೂ ಕ್ರಿಯೇಟಿವ್ ಮೈಂಡ್ಸ್ ಯೂತ್ ಅಸೋಸಿಯೇಷನ್ ಮೂಡಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಕ್ರೀಡಾಕೂಟಕ್ಕೆ ಸುದೀರ್ಘ ಇತಿಹಾಸವಿದ್ದು, ಇದು ಗ್ರಾಮೀಣ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ನಿರಂತರ ಪ್ರಯತ್ನ ನಡೆಸಿದರೆ ಈ ಭಾಗದ ಕ್ರೀಡಾಪಟುಗಳಿಗೆ ಮೈಸೂರು ದಸರಾ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುವ ಅವಕಾಶ ಸಿಗಲಿದೆ ಎಂದು ರಾಘವೇಂದ್ರ ಕೆಸವಳಲು ತಿಳಿಸಿದರು.
ಕಳೆದ 12 ವರ್ಷಗಳಿಂದ ಕ್ರಿಯೇಟಿವ್ ಮೈಂಡ್ಸ್ ಯೂತ್ ಅಸೋಸಿಯೇಷನ್ನ ಅಧ್ಯಕ್ಷ ಮನೋಜ್ ಹಾಗೂ ಸದಸ್ಯರು ನಿರಂತರವಾಗಿ ಕ್ರೀಡಾಕೂಟಗಳ ಸಂಘಟನೆಯಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕೆಡಿಪಿ ನಾಮನಿರ್ದೇಶಕ ಕೆ.ಎ. ರವಿ ಕುನ್ನಳ್ಳಿ ಮಾತನಾಡಿ, ಈ ಬಾರಿ ಸರಳವಾಗಿ ಕ್ರೀಡಾಕೂಟ ನಡೆಯುತ್ತಿದ್ದರೂ, ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಇದು ಸಹಕಾರಿಯಾಗಿದೆ. ಕ್ರೀಡೆಯು ಶಿಸ್ತು, ಸಂಯಮ ಹಾಗೂ ದೈಹಿಕ-ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಕಸಾಪ ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಕ್ರೀಡೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದ ಭಾಗವಾಗಬೇಕು. ಡಾ. ಪಿ.ಎ. ಅಡ್ಯಂತಾಯ ರಂಗಮಂದಿರದ ಪಕ್ಕದ ಬಾಲ್ ಬ್ಯಾಡ್ಮಿಂಟನ್ ಮೈದಾನದಲ್ಲಿ ಯುವಕರು ಹಾಗೂ ಹಿರಿಯರು ದಿನವೂ ಆಡುತ್ತಿದ್ದು, ಇದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕ್ರೀಡಾಪಟುಗಳಿಗೆ ಬಟ್ಟೆ ಬದಲಾಯಿಸಲು ಕೊಠಡಿ ಇಲ್ಲದಿರುವುದು, ಶೌಚಾಲಯ ದುರ್ನಾತ ಬೀರುತ್ತಿರುವುದು ಹಾಗೂ ಬಸ್ ನಿಲ್ದಾಣದ ಶೌಚಾಲಯದ ನೀರು ಮೈದಾನಕ್ಕೆ ಹರಿದುಬರುತ್ತಿರುವುದರಿಂದ ಕ್ರೀಡಾಪಟುಗಳು ಪರದಾಡುವಂತಾಗಿದೆ. ಈ ಸಮಸ್ಯೆಯ ಬಗ್ಗೆ ಸ್ಥಳೀಯ ಶಾಸಕರಾದ ನಯನಾ ಮೋಟಮ್ಮ ಅವರ ಗಮನಕ್ಕೆ ತಂದು ಶೀಘ್ರವೇ ಅವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸುವುದಾಗಿ ರಾಘವೇಂದ್ರ ಕೆಸವಳಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಲವೀನಾ ಸಿಲ್ವಿಯಾ ಲೋಬೋ ಅವರು ಬಾಲ್ ತ್ರೋ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕ್ರಿಯೇಟಿವ್ ಮೈಂಡ್ಸ್ ಯೂತ್ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಲಿಬಾಲ್ ತರಬೇತುದಾರರಾದ ಸಿ.ಎಸ್. ವಿನುತ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಂಜಾ, ಜೆಎಸ್ ಶಾಲೆಯ ಅಧ್ಯಕ್ಷ ಮೊಹಮ್ಮದ್ ಇಮ್ರಾನ್, ಸಚೇತನಾ ಯುವ ಸಂಘದ ಅಧ್ಯಕ್ಷ ರವಿರಾಜ್ ಅರಸ್ ಹಾಗೂ ಶಶಾಂಕ್ ಸಾಲೀಯಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.




























