ಚಿಕ್ಕಮಗಳೂರು: ಜೋಕಾಲಿ ಸೀರೆ ಉರುಳಾಗಿ 10 ವರ್ಷದ ಬಾಲಕಿ ಸಾವು
ಚಿಕ್ಕಮಗಳೂರು: ಆಟವಾಡುತ್ತಿದ್ದ ಬಾಲಕಿಯೊಬ್ಬಳು ಮನೆಯಲ್ಲಿ ಕಟ್ಟಿದ್ದ ಸೀರೆ ಜೋಕಾಲಿಗೆ ಕತ್ತು ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಬ್ಬಳ್ಳಿ ಗ್ರಾಮದ ನಿವಾಸಿ ಲೇಖನಾ (10) ಮೃತಪಟ್ಟ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಾಲಕಿ ಮನೆಯಲ್ಲಿ ಸೀರೆಯಿಂದ ಮಾಡಿದ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಸೀರೆ ಕೊರಳಿಗೆ ಸುತ್ತಿಕೊಂಡಿದೆ. ಜೋಕಾಲಿಯೇ ಮರಣಪಾಶವಾಗಿ ಪರಿಣಮಿಸಿದ್ದರಿಂದ ಬಾಲಕಿ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.
ಪೋಷಕರು ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಲೇಖನಾ ಒಬ್ಬಳೇ ಇದ್ದಳು ಎನ್ನಲಾಗಿದೆ. ಸಂಜೆ ಪೋಷಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಮಗಳ ಸ್ಥಿತಿಯನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಜೋಕಾಲಿ ಆಡುವ ಸಣ್ಣ ಆಸೆಯು ಬಾಲಕಿಯ ಪ್ರಾಣವನ್ನೇ ಕಿತ್ತುಕೊಂಡಿರುವುದು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























