ಜಿಲ್ಲಾಮಟ್ಟದ ದಸರಾ ಕರಾಟೆ ಸ್ಪರ್ಧೆ: ನೆಲ್ಯಾಡಿಯ ಫಾತಿಮತ್ ಫಶೀಲಾಗೆ ಕಂಚಿನ ಪದಕ, ವಿಶ್ವ ಕರಾಟೆ ಕೂಟಕ್ಕೆ ಆಯ್ಕೆ
ನೆಲ್ಯಾಡಿ: ಮಂಗಳೂರಿನಲ್ಲಿ ಅಕ್ಟೋಬರ್ 20ರಂದು ನಡೆದ ಜಿಲ್ಲಾಮಟ್ಟದ ದಸರಾ ಕರಾಟೆ ಸ್ಪರ್ಧೆಯಲ್ಲಿ ನೆಲ್ಯಾಡಿಯ ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ಫಾತಿಮತ್ ಫಶೀಲಾ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ವಿವಿಧ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಠಿಣ ಸ್ಪರ್ಧೆಯಲ್ಲಿ ಫಾತಿಮತ್ ಫಶೀಲಾ ತಮ್ಮ ಕೌಶಲ್ಯಪೂರ್ಣ ಪ್ರದರ್ಶನದ ಮೂಲಕ ಪದಕ ಗೆದ್ದು ವಿದ್ಯಾಸಂಸ್ಥೆಗೆ ಹಾಗೂ ಊರಿಗೆ ಹೆಮ್ಮೆ ತಂದಿದ್ದಾರೆ.
ಫಾತಿಮತ್ ಫಶೀಲಾ ಅವರು ಪ್ರತಿಭಾನ್ವಿತ ಕರಾಟೆ ಪಟುವಾಗಿದ್ದು, ಈ ಹಿಂದೆ ಅನೇಕ ಹಂತದ ಚಾಂಪಿಯನ್ಶಿಪ್ ಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ಹಾಗೂ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇವರ ನಿರಂತರ ಸಾಧನೆಗೆ ಮುಕುಟಪ್ರಾಯವಾಗಿ, ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ‘ವಿಶ್ವ ಕರಾಟೆ ಸ್ಪರ್ಧೆ’ಯಲ್ಲಿ ಭಾರತವನ್ನು ಪ್ರತಿನಿಧಿಸಲು ಇವರು ಆಯ್ಕೆಯಾಗಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶೈಕ್ಷಣಿಕ ವಿಭಾಗದಲ್ಲೂ ಮುಂಚೂಣಿಯಲ್ಲಿರುವ ಫಾತಿಮತ್, ತಮ್ಮ ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ 571 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದರು.
ಕ್ರೀಡೆ ಮತ್ತು ಶಿಕ್ಷಣ ಎರಡರಲ್ಲೂ ನಿರಂತರ ಸಾಧನೆ ಮಾಡುತ್ತಿರುವ ಇವರ ಈ ಮೆಚ್ಚುಗೆಯ ಮೈಲಿಗಲ್ಲಿಗೆ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಸಹಪಾಠಿಗಳು ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ವಿಶ್ವ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.




























