ಗಿಟಾರ್ ಬ್ಯಾಗ್‌ ಗೆ ಹೆಲ್ಮೆಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ₹500 ದಂಡ ವಿಧಿಸಿದ AI ಕ್ಯಾಮೆರಾ! - Mahanayaka

ಗಿಟಾರ್ ಬ್ಯಾಗ್‌ ಗೆ ಹೆಲ್ಮೆಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ₹500 ದಂಡ ವಿಧಿಸಿದ AI ಕ್ಯಾಮೆರಾ!

ai camera
26/09/2026

ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಅಳವಡಿಸಲಾಗಿರುವ AI (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳ ತಾಂತ್ರಿಕ ಎಡವಟ್ಟುಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿವೆ. ಇತ್ತೀಚೆಗೆ ಕಾರು ಚಾಲಕರಿಗೆ ಹೆಲ್ಮೆಟ್ ದಂಡ ವಿಧಿಸಿದ ಘಟನೆಗಳು ಸುದ್ದಿಯಾಗಿದ್ದ ಬೆನ್ನಲ್ಲೇ, ಇದೀಗ ಬೆಂಗಳೂರಿನಲ್ಲಿ ಸ್ಕೂಟರ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಭಾವಿಸಿರುವ AI ಕ್ಯಾಮೆರಾ, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ₹500 ದಂಡ ವಿಧಿಸಿರುವ ಹಾಸ್ಯಾಸ್ಪದ ಘಟನೆ ಬೆಳಕಿಗೆ ಬಂದಿದೆ.

ಸೌವಿಕ್ ದತ್ತ ಎಂಬುವವರು ತಮ್ಮ ಸ್ಕೂಟರ್‌ ನಲ್ಲಿ ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಅವರು ತಮ್ಮ ಗಿಟಾರ್ ಅನ್ನು ಬೆನ್ನಿಗೆ ತಗುಲಿಸಿಕೊಂಡಿದ್ದರು. ಹೆಬ್ಬಾಳದ ಟಿನ್ ಫ್ಯಾಕ್ಟರಿ ಸಿಗ್ನಲ್ ಬಳಿ ಇರುವ ಇಂಟೆಲಿಜೆಂಟ್ ಟ್ರಾಫಿಕ್ ಎನ್‌ ಫೋರ್ಸ್‌ಮೆಂಟ್ ಮ್ಯಾನೇಜ್‌ ಮೆಂಟ್ ಸಿಸ್ಟಮ್ (ITEMS) ನ AI ಕ್ಯಾಮೆರಾ, ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿದೆ.

ಅಲ್ಲದೆ, ಆ ಗಿಟಾರ್ ಸವಾರ (ಬ್ಯಾಗ್) ಹೆಲ್ಮೆಟ್ ಧರಿಸಿಲ್ಲ ಎಂದು ಪರಿಗಣಿಸಿ, ಸ್ವಯಂಚಾಲಿತವಾಗಿ ₹500 ದಂಡದ ಇ–ಚಲನ್ (E-Challan) ಅನ್ನು ಸವಾರನ ಪತ್ನಿಯ ಮೊಬೈಲ್‌ ಗೆ ರವಾನಿಸಿದೆ.

ಮೊಬೈಲ್‌ಗೆ ಬಂದ ದಂಡದ ಸಂದೇಶ ಹಾಗೂ ಅದರಲ್ಲಿರುವ ಫೋಟೋವನ್ನು ನೋಡಿ ಶಾಕ್ ಆದ ಸವಾರ, ಈ ತಾಂತ್ರಿಕ ಯಡವಟ್ಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರು ಟ್ರಾಫಿಕ್ ಕ್ಯಾಮೆರಾಗಳ ಕಾರ್ಯವೈಖರಿಯ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಸಂಚಾರ ಪೊಲೀಸರು, ದಂಡದ ಬಗ್ಗೆ ಪರಿಶೀಲನೆ ನಡೆಸಲು ಸವಾರರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಅಳವಡಿಸಿರುವ ಇಂತಹ ಅತ್ಯಾಧುನಿಕ ಕ್ಯಾಮೆರಾಗಳು ಕಳುಹಿಸುವ ದಂಡದ ಚಲನ್‌ ಗಳನ್ನು ಆನ್‌ ಲೈನ್‌ ನಲ್ಲಿ ಅಪ್‌ ಲೋಡ್ ಮಾಡುವ ಮುನ್ನ ಪೊಲೀಸರು ಮ್ಯಾನುವಲ್ ಆಗಿ (ಖುದ್ದಾಗಿ) ಪರಿಶೀಲಿಸಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಪ್ರಮಾದಗಳು ನೇರವಾಗಿ ಸಾರ್ವಜನಿಕರ ಕೈ ಸೇರುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler