19 ತಿಂಗಳ ಕಂದಮ್ಮನ ಮೇಲೆ ಹರಿದ ಶಾಲಾ ಬಸ್: ಅಮ್ಮನ ಕಣ್ಣೆದುರೇ ಮಗು ಸಾವು!
ಮೈಸೂರು: ಶಾಲೆ ಮುಗಿಸಿ ಮನೆಗೆ ಬಂದ ಅಣ್ಣನನ್ನು ಸ್ವಾಗತಿಸಲು ಹೋಗಿದ್ದ ಕೇವಲ 19 ತಿಂಗಳ ಪುಟ್ಟ ಬಾಲಕಿಯ ಮೇಲೆ ಶಾಲಾ ಬಸ್ ಹರಿದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಲತೀಕ್ಷಾ ಎಂದು ಗುರುತಿಸಲಾಗಿದೆ. ಈಕೆ ಶಾಸ್ತ್ರಿ ಪಬ್ಲಿಕ್ ಶಾಲೆಯ ವಾಹನದ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಶಾಸ್ತ್ರಿ ಪಬ್ಲಿಕ್ ಶಾಲೆಯ ವಾಹನವು ನಾಲ್ಕು ವರ್ಷದ ಬಾಲಕನನ್ನು (ಮೃತರ ಅಣ್ಣ) ಶಾಲೆಯಿಂದ ಬಿಡಲು ಮನೆ ಬಳಿ ಬಂದಿತ್ತು. ಬಾಲಕನ ತಾಯಿ ಬಸ್ ನಿಂದ ಮಗುವನ್ನು ಕೆಳಗಿಳಿಸುತ್ತಿದ್ದ ಸಂದರ್ಭದಲ್ಲಿ, ಶಾಲಾ ವಾಹನವು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ. ಈ ವೇಳೆ ವಾಹನದ ಸಮೀಪದಲ್ಲೇ ನಿಂತಿದ್ದ 19 ತಿಂಗಳ ಲತೀಕ್ಷಾಳಿಗೆ ಬಸ್ ಡಿಕ್ಕಿ ಹೊಡೆದಿದೆ. ವಾಹನದ ಚಕ್ರವು ಮಗುವಿನ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ 42 ವರ್ಷದ ಚಾಲಕ ಸಿದ್ದರಾಜು ಎಂಬಾತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಾಯಿಯ ಕಣ್ಣೆದುರೇ ನಡೆದ ದುರ್ಘಟನೆಯು ಮೃತರ ಕುಟುಂಬದಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕ ಮಡುಗಟ್ಟುವಂತೆ ಮಾಡಿದೆ.




























