ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ನವದೆಹಲಿ: ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಒಪ್ಪಿಗೆಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತರು (CEC) ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ಪರವಾಗಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದೇ ಎಂದು ಪ್ರಶ್ನಿಸಿರುವ ಹೊಸ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಈ ವಿಷಯವನ್ನು ಪ್ರಸ್ತಾಪಿಸಿದರು. ಬಹು–ಸದಸ್ಯ ಆಯೋಗದ ನಿರ್ಧಾರಗಳು ಕಡ್ಡಾಯವಾಗಿ ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಇರಬೇಕೆಂದು ಪ್ರತಿಪಾದಿಸಿದ ಅವರು, ಈ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿದರು.
ಸಂವಿಧಾನದ 324ನೇ ವಿಧಿಯು ಚುನಾವಣಾ ಆಯೋಗಕ್ಕೆ ಒಂದು ಸಮಷ್ಟಿ ಸಂಸ್ಥೆಯಾಗಿ ಸಾಮೂಹಿಕ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ನೀಡಿದೆಯೇ ಹೊರತು, ಜ್ಞಾನೇಶ್ ಕುಮಾರ್ ಅವರನ್ನು ಕೇವಲ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ ಹಾಗೂ ಆಯೋಗದ ಸಾಮೂಹಿಕ ಅಧಿಕಾರದ ಮೇಲೆ ಅವರಿಗೆ ಯಾವುದೇ ವೈಯಕ್ತಿಕ ಹಕ್ಕನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗದಲ್ಲಿ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಕೈಗೊಂಡ ಆಂತರಿಕ ನಿರ್ಧಾರಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಹತ್ತು ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಔಪಚಾರಿಕ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬ ವರದಿಯ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ.
ಫಾರ್ಮ್-6 ಮತ್ತು ಸಾಫ್ಟ್ವೇರ್ ಕಳವಳ: ಫಾರ್ಮ್-6ರಲ್ಲಿ ಮಾಡಲಾದ ಬದಲಾವಣೆಗಳು ಮತ್ತು ದೆಹಲಿಯಲ್ಲಿ ಮತದಾರರ ಪಟ್ಟಿಯ ಸಾಫ್ಟ್ವೇರ್ ಕೇಂದ್ರೀಕರಣದ ಬಗ್ಗೆಯೂ ಆಯುಕ್ತರು ಕಳವಳ ವ್ಯಕ್ತಪಡಿಸಿದ್ದರು ಎಂದು ವಾದಿಸಲಾಗಿದೆ.
ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ಆಂತರಿಕ ನಿರ್ಧಾರಗಳ ಪ್ರಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಈ ಅರ್ಜಿಯನ್ನು ಮುಂದಿನ ವಾರ ವಿಚಾರಣಾ ಪಟ್ಟಿಯಲ್ಲಿ ಸೇರಿಸಲು ಸರ್ವೋಚ್ಚ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.




























