ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ: 'ಡ್ರೋನ್ ಪ್ರತಾಪ್' ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ - Mahanayaka

ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ: ‘ಡ್ರೋನ್ ಪ್ರತಾಪ್’ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

drone prathap
29/09/2026

ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಹಾಗೂ ‘ಡ್ರೋನ್ ಪ್ರತಾಪ್’ ಎಂದೇ ಖ್ಯಾತರಾಗಿರುವ ಎನ್.ಎಂ. ಪ್ರತಾಪ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪ್ರತಾಪ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಪ್ರತಾಪ್ ನಡೆಸಿದ ಪ್ರಯೋಗವು 10ನೇ ತರಗತಿಯ ಎನ್‌ ಸಿಇಆರ್‌ ಟಿ ಪಠ್ಯಕ್ರಮದಲ್ಲಿರುವ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಇದರ ಉದ್ದೇಶ ಸಂಪೂರ್ಣವಾಗಿ ಶೈಕ್ಷಣಿಕವಾಗಿದ್ದು, ಯಾವುದೇ ದುರುದ್ದೇಶ ಕಂಡುಬಂದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರತಾಪ್ ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಡ್ರೋನ್‌ ಗಳನ್ನು ನಿರ್ಮಿಸುವ ಯೂಟ್ಯೂಬರ್ ಆಗಿದ್ದು, ರಾಸಾಯನಿಕ ಕ್ರಿಯೆಯನ್ನು ಸಾರ್ವಜನಿಕರಿಗೆ ಶೈಕ್ಷಣಿಕವಾಗಿ ವಿವರಿಸುವ ಉದ್ದೇಶದಿಂದ ವಿಡಿಯೋ ಮಾಡಿದ್ದರು. ಪ್ರಕರಣ ಮುಂದುವರಿಸಲು ಅಗತ್ಯವಿರುವ ದುರುದ್ದೇಶ ಸಾಬೀತಾಗದ ಕಾರಣ, ಎಫ್‌ ಐಆರ್ ಹಾಗೂ ಸಂಬಂಧಿತ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲಾಗಿದೆ.

ಪ್ರಯೋಗ ನಡೆಸಿದ ವಿಧಾನವನ್ನು ನ್ಯಾಯಾಲಯವು ಸಮರ್ಥಿಸುವುದಿಲ್ಲ ಅಥವಾ ಶ್ಲಾಘಿಸುವುದಿಲ್ಲ. ಆದರೆ, ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳು ಮರುಕಳಿಸಿದರೆ ಅವುಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಪ್ರತಾಪ್ ಅವರು ತಮ್ಮ ಸ್ನೇಹಿತನ ಖಾಸಗಿ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ 100 ಗ್ರಾಂ ಸೋಡಿಯಂ ಬಳಸಿ ವೈಜ್ಞಾನಿಕ ಪ್ರಯೋಗ ನಡೆಸಿ, ಆ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಜೀವ ಅಥವಾ ಆಸ್ತಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಸ್ಫೋಟ ನಡೆಸಿದ ಆರೋಪದಡಿ 2024ರ ಡಿಸೆಂಬರ್‌ನಲ್ಲಿ ಪ್ರತಾಪ್ ಅವರನ್ನು ಬಂಧಿಸಲಾಗಿತ್ತು. ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler