ವಿಪರೀತ ತಾಪಮಾನ ಏರಿಕೆ: ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಜೀವಕ್ಕೆ ಗಂಭೀರ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ - Mahanayaka

ವಿಪರೀತ ತಾಪಮಾನ ಏರಿಕೆ: ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಜೀವಕ್ಕೆ ಗಂಭೀರ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ

mother pregnancy
05/10/2026

ನಾಡಾ (ಫಿಜಿ): ಜಾಗತಿಕವಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿಪರೀತ ಶಾಖವು ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಜೀವಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡುತ್ತಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥ ಸೈಮನ್ ಸ್ಟಿಯಲ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಫಿಜಿಯ ನಾಡಿಯಲ್ಲಿ ನಡೆಯುತ್ತಿರುವ ಪ್ರಿ–ಕಾಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ತೀವ್ರ ಶಾಖದಿಂದಾಗಿ ಗರ್ಭಾವಸ್ಥೆಯಲ್ಲಿ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಹೊಸ ಸಮೀಕ್ಷಾ ವರದಿಯನ್ನು ಉಲ್ಲೇಖಿಸಿದರು. ಐದು ಖಂಡಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಮೂರನೇ ಎರಡರಷ್ಟು ಆರೋಗ್ಯ ತಜ್ಞರು ವಿಪರೀತ ತಾಪಮಾನದಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದನ್ನು ದೃಢಪಡಿಸಿದ್ದಾರೆ.

ಹವಾಮಾನ ಬಿಕ್ಕಟ್ಟು ಮತ್ತು ತಾಪಮಾನ ಏರಿಕೆಯಿಂದಾಗಿ ಅವಧಿಪೂರ್ವ ಹೆರಿಗೆ, ಮೃತ ಶಿಶು ಜನನ (Stillbirth), ಹುಟ್ಟುವಾಗ ಶಿಶುವಿನ ತೂಕ ಕಡಿಮೆಯಾಗುವುದು ಹಾಗೂ ತಾಯಂದಿರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತಿವೆ. ವಿಜ್ಞಾನಿಗಳ ಪ್ರಕಾರ, ಹವಾಮಾನ ಬದಲಾವಣೆಯು ಜಾಗತಿಕವಾಗಿ ತಾಪಮಾನದ ದಾಖಲೆಗಳನ್ನು ಮುರಿಯುತ್ತಿದ್ದು, ಇದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ. ಯುರೋಪಿಯನ್ ಯೂನಿಯನ್‌ನ ಕೊಪರ್ನಿಕಸ್ ಹವಾಮಾನ ವೀಕ್ಷಣಾಲಯದ ದತ್ತಾಂಶದ ಪ್ರಕಾರ ಪಶ್ಚಿಮ ಯುರೋಪ್‌ನಿಂದ ಹಿಡಿದು ಮಧ್ಯ ಅಮೆರಿಕದವರೆಗೆ ಹಲವು ದೇಶಗಳಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗಿದೆ.

ವೆಲ್​ ಕಮ್ ಚಾರಿಟಬಲ್ ಫೌಂಡೇಶನ್ ವತಿಯಿಂದ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಜಿಂಬಾಬ್ವೆ ದೇಶಗಳಲ್ಲಿ ಸುಮಾರು 1 ಸಾವಿರ ಪ್ರಸೂತಿ ತಜ್ಞರು ಹಾಗೂ ವೈದ್ಯರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ. ಈ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಹಾಗೂ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್, “ವಿಪರೀತ ಶಾಖವು ಕಣ್ಣಿಗೆ ಕಾಣದ ಕೊಲೆಗಾರನಿದ್ದಂತೆ. ಹವಾಮಾನ ಬದಲಾವಣೆಯಿಂದಾಗಿ ತಾಯಂದಿರು ಮತ್ತು ಶಿಶುಗಳು ನಿರಂತರ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಜಾಗತಿಕ ನಾಯಕರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು” ಎಂದು ಆಗ್ರಹಿಸಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ವೈದ್ಯರು ತೀವ್ರ ಶಾಖದ ಕಾರಣದಿಂದಾಗಿ ಶಿಶುಗಳಲ್ಲಿ ಕಡಿಮೆ ತೂಕ, ಬೆಳವಣಿಗೆ ಕುಂಠಿತ, ಹಾಲುಣಿಸುವಲ್ಲಿ ತೊಂದರೆ ಹಾಗೂ ನಿರ್ಜಲೀಕರಣದ ಸಮಸ್ಯೆಗಳಿಂದ ಬಳಲುತ್ತಿದ್ದ ತಾಯಂದಿರು ಮತ್ತು ಶಿಶುಗಳಿಗೆ ಚಿಕಿತ್ಸೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮುಂದಿನ ತಿಂಗಳು ಟರ್ಕಿಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಶೃಂಗಸಭೆಗೂ ಮುನ್ನ ಫಿಜಿ ಮತ್ತು ತುವಾಲು ದ್ವೀಪಗಳಲ್ಲಿ ಈ ಪ್ರಿ-ಕಾಪ್ ಶೃಂಗಸಭೆ ನಡೆಯುತ್ತಿದ್ದು, ಹವಾಮಾನ ಬದಲಾವಣೆಯಿಂದ ಮುಂಚೂಣಿಯಲ್ಲಿ ಸಂಕಷ್ಟಕ್ಕೀಡಾಗಿರುವ ಪೆಸಿಫಿಕ್ ರಾಷ್ಟ್ರಗಳ ಜನರ ಜೀವನದತ್ತ ಜಾಗತಿಕ ಗಮನ ಸೆಳೆಯಲು ಇದು ಅತ್ಯಂತ ಮಹತ್ವದ್ದಾಗಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler