ಮೈಸೂರು: ಹಣಕಾಸು ಜಗಳ; ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು 400 ಮೀಟರ್ ಎಳೆದೊಯ್ದ ಆರ್​ಟಿಐ ಕಾರ್ಯಕರ್ತನ ಬಂಧನ! - Mahanayaka

ಮೈಸೂರು: ಹಣಕಾಸು ಜಗಳ; ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು 400 ಮೀಟರ್ ಎಳೆದೊಯ್ದ ಆರ್​ಟಿಐ ಕಾರ್ಯಕರ್ತನ ಬಂಧನ!

22/05/2026

ಮೈಸೂರು: ಸಾಲದ ಹಣ ಮರುಪಾವತಿ ವಿಚಾರಕ್ಕೆ ಆರಂಭವಾದ ಗಲಾಟೆಯೊಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದು, ವ್ಯಕ್ತಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಸುಮಾರು 400 ಮೀಟರ್ ದೂರದವರೆಗೆ ಎಳೆದೊಯ್ದ ಭೀಕರ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರ್​ ಟಿಐ ಕಾರ್ಯಕರ್ತ ಗಂಗರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಧನಂಜಯ ಎಂಬುವವರು ಆರೋಪಿ ಗಂಗರಾಜು ಅವರಿಗೆ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಗಂಗರಾಜು ತಮ್ಮ ಕಾರನ್ನು ಚಲಾಯಿಸಲು ಮುಂದಾಗಿದ್ದಾರೆ. ಈ ವೇಳೆ ಧನಂಜಯ ಅವರು ಕಾರನ್ನು ತಡೆಯಲು ಯತ್ನಿಸಿ ಬಾನೆಟ್ ಮೇಲೆ ಹತ್ತಿದ್ದಾರೆ. ಆದರೆ, ಗಂಗರಾಜು ಕಾರನ್ನು ನಿಲ್ಲಿಸದೇ ಆಂದೋಲನ ವೃತ್ತದ ಬಳಿಯ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ಕುವೆಂಪುನಗರ ಪೊಲೀಸ್ ಠಾಣೆ ರಸ್ತೆಯವರೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

ಸುಮಾರು 400 ರಿಂದ 500 ಮೀಟರ್ ದೂರದವರೆಗೆ ಧನಂಜಯ ಅವರು ಕಾರಿನ ಬಾನೆಟ್‌ಗೆ ಅಂಟಿಕೊಂಡು ಪ್ರಾಣಭಯದಿಂದ ನೇತಾಡುತ್ತಲೇ ಸಾಗಿದ್ದಾರೆ. ಈ ದೃಶ್ಯ ರಸ್ತೆಯಲ್ಲಿದ್ದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಕೊನೆಗೆ ಸುಮಾರು 1 ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಗಂಗರಾಜು ಅವರು ಕುವೆಂಪುನಗರ ಪೊಲೀಸ್ ಠಾಣೆಯ ಮುಂದೆ ಕಾರನ್ನು ನಿಲ್ಲಿಸಿದ್ದಾರೆ.

ಕೊಲೆ ಯತ್ನ ಪ್ರಕರಣ ದಾಖಲು:

“ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಗಂಗರಾಜು ಅವರು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ” ಎಂದು ಸಂತ್ರಸ್ತ ಧನಂಜಯ್ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಗಂಗರಾಜು ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು, ಅವರನ್ನು ಬಂಧಿಸಿದ್ದಾರೆ. ಸದ್ಯ ಘಟನೆಯ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ