ಯುವಕನಿಗೆ ಬಲವಂತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ; ಇಬ್ಬರು ಟ್ರಾನ್ಸ್ ಜೆಂಡರ್ ಗಳ ಬಂಧನ
ಚಿತ್ರದುರ್ಗ: 22 ವರ್ಷದ ಯುವಕನೊಬ್ಬನನ್ನು ಅಪಹರಿಸಿ, ಹಲ್ಲೆ ನಡೆಸಿ, ಯಾವುದೇ ಒಪ್ಪಿಗೆಯಿಲ್ಲದೆ ಬಲವಂತವಾಗಿ ಮರ್ಮಾಂಗ ಶಸ್ತ್ರಚಿಕಿತ್ಸೆಗೆ (Gender Reassignment Surgery) ಒಳಪಡಿಸಿದ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಟ್ರಾನ್ಸ್ ಜೆಂಡರ್ ಗಳನ್ನು ಬಂಧಿಸಿದ್ದಾರೆ.
ಸಂತ್ರಸ್ತ ಯುವಕ ಕಳೆದ ನಾಲ್ಕು ವರ್ಷಗಳಿಂದ ಚಿತ್ರದುರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸಣ್ಣದಾಗಿ ಹೂವಿನ ವ್ಯಾಪಾರ ಮಾಡುತ್ತಿದ್ದನು. ದೇವಸ್ಥಾನಗಳಿಗೆ ಹೂವು ಪೂರೈಸುವ ವೇಳೆ ಆತನಿಗೆ ಟ್ರಾನ್ಸ್ ಜೆಂಡರ್ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಆ ವ್ಯಕ್ತಿ ಹಾಗೂ ಮತ್ತೊಬ್ಬರು ಸೇರಿ ಯುವಕನಿಗೆ ವಿರೋಧವಿದ್ದರೂ ಬಲವಂತವಾಗಿ ಮಹಿಳೆಯರ ಬಟ್ಟೆ ಧರಿಸಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು.
ಸೆಪ್ಟೆಂಬರ್ 1 ರಂದು ಯುವಕನ ಮುಖಕ್ಕೆ ಬಟ್ಟೆ ಕಟ್ಟಿ, ವಾಹನದಲ್ಲಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಯಾವುದೇ ಒಪ್ಪಿಗೆಯಿಲ್ಲದೆ ಜನನಾಂಗದ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಚಿತ್ರದುರ್ಗದ ಸ್ಟೇಡಿಯಂ ರಸ್ತೆ ಬಳಿಯ ಕೊಠಡಿಯೊಂದರಲ್ಲಿ ಆತನನ್ನು ಕೂಡಿಹಾಕಿ ಹೊರಗೆ ಲಾಕ್ ಮಾಡಲಾಗಿತ್ತು.
ಸೆಪ್ಟೆಂಬರ್ 11 ರಂದು ಧಾರ್ಮಿಕ ವಿಧಿವಿಧಾನದ ವೇಳೆ ಆರೋಪಿಗಳಲ್ಲಿ ಒಬ್ಬರು ಶಸ್ತ್ರಚಿಕಿತ್ಸೆಯ ಗಾಯದ ಬಳಿ ಇದ್ದಿಲು ಕಾವನ್ನು ಇಟ್ಟಿದ್ದರಿಂದ ಯುವಕನ ಎರಡೂ ತೊಡೆಗಳಿಗೆ ಸುಟ್ಟ ಗಾಯಗಳಾಗಿವೆ. ನೋವಿನಿಂದ ಆತ ಜೋರಾಗಿ ಕೂಗಾಡಿದಾಗಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ.
ಸೆಪ್ಟೆಂಬರ್ 29 ರಂದು ಆರೋಪಿಗಳು ಯುವಕನನ್ನು ಬಿಡುಗಡೆ ಮಾಡಿ, ಚಿತ್ರದುರ್ಗ ನಗರದ ಚಳ್ಳಕೆರೆ ವೃತ್ತದಲ್ಲಿ ಭಿಕ್ಷೆ ಬೇಡುವಂತೆ ಸೂಚಿಸಿದ್ದರು. ಬಳಿಕ ಯುವಕ ತನ್ನ ಕುಟುಂಬಕ್ಕೆ ಕರೆ ಮಾಡಿ ತನಗೆ ನಡೆಯಲು ಆಗುತ್ತಿಲ್ಲವೆಂದೂ, ತೀವ್ರ ರಕ್ತಸ್ರಾವ ಹಾಗೂ ಸುಸ್ತು ಆಗುತ್ತಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಎಚ್ಚೆತ್ತ ಪೋಷಕರು ಆತನನ್ನು ಜಜ್ಜೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಪರಶುರಾಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆತ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಕ್ಟೋಬರ್ 9 ರಂದು ಯುವಕನ ತಂದೆ ನೀಡಿದ ದೂರಿನ ಮೇರೆಗೆ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಾನೂನುಬಾಹಿರ ಗುಂಪು ಸೇರುವುದು, ಹಲ್ಲೆ, ಅಕ್ರಮ ಬಂಧನ, ಅಪಹರಣ, ಕ್ರಿಮಿನಲ್ ಸಂಚು ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ಇಬ್ಬರು ಆರೋಪಿಗಳಾದ ಅನುಷ್ಕಾ ಮತ್ತು ನಳಿನಾ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




























