ಕೃತಕ ಬುದ್ಧಿಮತ್ತೆ (AI) ನಿಯಂತ್ರಣಕ್ಕೆ ಪೋಪ್ ಲಿಯೋ ಕರೆ: "ಹೊಸ ಡಿಜಿಟಲ್ ಗುಲಾಮಗಿರಿ"ಯ ಬಗ್ಗೆ ಎಚ್ಚರಿಕೆ - Mahanayaka

ಕೃತಕ ಬುದ್ಧಿಮತ್ತೆ (AI) ನಿಯಂತ್ರಣಕ್ಕೆ ಪೋಪ್ ಲಿಯೋ ಕರೆ: “ಹೊಸ ಡಿಜಿಟಲ್ ಗುಲಾಮಗಿರಿ”ಯ ಬಗ್ಗೆ ಎಚ್ಚರಿಕೆ

pope leo
26/05/2026

ವ್ಯಾಟಿಕನ್ ಸಿಟಿ: ರೋಮನ್ ಕ್ಯಾಥೋಲಿಕ್ ಚರ್ಚ್‌ನ ಅತ್ಯುನ್ನತ ಧರ್ಮಗುರುಗಳಾದ ಪೋಪ್ ಲಿಯೋ XIV ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ತೀವ್ರ ಬೆಳವಣಿಗೆಯ ಕುರಿತು ಜಾಗತಿಕ ಸಮುದಾಯಕ್ಕೆ ಬಲವಾದ ನೈತಿಕ ಮತ್ತು ರಾಜಕೀಯ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ಅಧಿಕಾರಾವಧಿಯ ಮೊದಲ ಪ್ರಮುಖ ಧಾರ್ಮಿಕ ಪತ್ರವಾದ (Encyclical) 42,300 ಪದಗಳ “ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್” (Magnificent Humanity) ಎಂಬ ಐತಿಹಾಸಿಕ ದಾಖಲೆಯನ್ನು ವ್ಯಾಟಿಕನ್ ಸೋಮವಾರ ಬಿಡುಗಡೆ ಮಾಡಿದೆ. ಇದರಲ್ಲಿ ಅವರು, “ಮಾನವೀಯತೆಯನ್ನು ರಕ್ಷಿಸಲು AI ತಂತ್ರಜ್ಞಾನವನ್ನು ನಿಶ್ಯಸ್ತ್ರಗೊಳಿಸಬೇಕು (Disarm AI)” ಎಂದು ಕರೆ ನೀಡಿದ್ದಾರೆ.

ಕೇವಲ ಲಾಭ ಮತ್ತು ಮಾರುಕಟ್ಟೆಯ ಸ್ಪರ್ಧೆಗಾಗಿ ತಂತ್ರಜ್ಞಾನವನ್ನು ಬಳಸುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟ ಉಂಟಾಗಬಹುದು ಎಂದು ಪೋಪ್ ಆತಂಕ ವ್ಯಕ್ತಪಡಿಸಿದ್ದಾರೆ. “ಹೆಚ್ಚಿನ ಲಾಭದ ಹಪಾಹಪಿಯು ವ್ಯವಸ್ಥಿತವಾಗಿ ಉದ್ಯೋಗಗಳನ್ನು ಬಲಿ ಕೊಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಸಮಾಜದಲ್ಲಿ ಬಡತನ ಮತ್ತು ಅಸಮಾನತೆಯನ್ನು ಹೆಚ್ಚಿಸಲಿದೆ,” ಎಂದು ಅವರು ಎಚ್ಚರಿಸಿದ್ದಾರೆ.

ಒಂದೊಮ್ಮೆ ಜಗತ್ತಿನಲ್ಲಿ ಗುಲಾಮಗಿರಿಯನ್ನು ಹೇಗೆ ಸಹಜ ಎಂಬಂತೆ ನೋಡಲಾಗುತ್ತಿತ್ತೋ, ಅದೇ ರೀತಿ ಇಂದು ಮನುಷ್ಯರನ್ನು ಕೇವಲ ‘ಡೇಟಾ ಮತ್ತು ಉತ್ಪಾದನಾ ಸಾಮರ್ಥ್ಯ’ದ ಘಟಕಗಳನ್ನಾಗಿ ನೋಡುವ ಹೊಸ ಡಿಜಿಟಲ್ ಗುಲಾಮಗಿರಿಯತ್ತ ಜಗತ್ತು ಸಾಗುತ್ತಿದೆ ಎಂದು ಪೋಪ್ ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನವು ಮನುಷ್ಯನ ಘನತೆ ಮತ್ತು ಮೌಲ್ಯವನ್ನು ಕುಗ್ಗಿಸಬಾರದು ಎಂದು ಅವರು ಹೇಳಿದ್ದಾರೆ.

AI ತಂತ್ರಜ್ಞಾನವನ್ನು ರೂಪಿಸುವ ಡೆವಲಪರ್‌ ಗಳು ಮತ್ತು ಇಂಜಿನಿಯರ್‌ ಗಳಿಗೆ ವಿಶೇಷ ಮನವಿ ಮಾಡಿರುವ ಪೋಪ್, “ನೀವು ಕೇವಲ ಪರಿಕರಗಳನ್ನು ನಿರ್ಮಿಸುತ್ತಿಲ್ಲ, ಬದಲಿಗೆ ಮಾನವ ಜೀವನದ ಭವಿಷ್ಯವನ್ನು ರೂಪಿಸುತ್ತಿದ್ದೀರಿ. ಹೀಗಾಗಿ ನಿಮ್ಮ ವಿನ್ಯಾಸಗಳು ಮಾನವ ಘನತೆ, ನ್ಯಾಯ ಮತ್ತು ಒಗ್ಗಟ್ಟನ್ನು ಆಧರಿಸಿರಬೇಕು,” ಎಂದು ನೆನಪಿಸಿದ್ದಾರೆ.

ಯುದ್ಧಗಳಲ್ಲಿ AI ಮತ್ತು ಸ್ವಯಂಚಾಲಿತ ಆಯುಧಗಳ ಬಳಕೆಯನ್ನು ಪೋಪ್ ಲಿಯೋ ತೀವ್ರವಾಗಿ ಖಂಡಿಸಿದ್ದಾರೆ. “ಯಾವುದೇ ಅಲ್ಗಾರಿದಮ್ (Algorithm) ಯುದ್ಧವನ್ನು ನೈತಿಕವಾಗಿ ಒಪ್ಪಿಕೊಳ್ಳುವಂತೆ ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನದ ಬಳಕೆಯು ಯುದ್ಧದ ಕ್ರೌರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಹಾಗೂ ಮನುಷ್ಯರ ಜೀವಕ್ಕೆ ಬೆಲೆಯಿಲ್ಲದಂತೆ ಮಾಡುತ್ತದೆ,” ಎಂದು ಅವರು ಹೇಳಿದ್ದಾರೆ.

ನಿಯಂತ್ರಣವಿಲ್ಲದ ತಾಂತ್ರಿಕ ಮಹತ್ವಾಕಾಂಕ್ಷೆಯನ್ನು ಬೈಬಲ್‌ ನ ಪ್ರಸಿದ್ಧ ‘ಟವರ್ ಆಫ್ ಬಾಬೆಲ್’ ಕಥೆಗೆ ಹೋಲಿಸಿರುವ ಪೋಪ್, ಮನುಷ್ಯ ಕೇವಲ ಡೇಟಾ ಮತ್ತು ತಾಂತ್ರಿಕ ನಿಯಂತ್ರಣದ ಹಿಂದೆ ಬಿದ್ದು ನೈತಿಕತೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮರೆತರೆ ಇಡೀ ಸಮಾಜವೇ ಯಾಂತ್ರಿಕವಾಗಿ, ಮಾನವೀಯತೆ ರಹಿತವಾಗಿ ಬದಲಾಗಬಹುದು ಎಂದು ಎಚ್ಚರಿಸಿದ್ದಾರೆ.

AI ತಂತ್ರಜ್ಞಾನ ಮತ್ತು ಡೇಟಾದ ಅಧಿಕಾರವು ಕೇವಲ ಕೆಲವೇ ಕೆಲವು ಖಾಸಗಿ ಬೃಹತ್ ಕಂಪನಿಗಳ ಅಥವಾ ರಾಜಕೀಯ ಶಕ್ತಿಗಳ ಕೈಯಲ್ಲಿ ಇರಬಾರದು. ಇದಕ್ಕಾಗಿ ಕಟ್ಟುನಿಟ್ಟಾದ ಕಾನೂನು ಚೌಕಟ್ಟುಗಳು, ಸ್ವತಂತ್ರ ಮೇಲ್ವಿಚಾರಣೆ ಮತ್ತು ಸರ್ಕಾರದ ಸಕ್ರಿಯ ಹಸ್ತಕ್ಷೇಪದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

AI ತಂತ್ರಜ್ಞಾನವು ಮನುಷ್ಯನ ಬುದ್ಧಿವಂತಿಕೆಯನ್ನು ಕೇವಲ ನಕಲು ಮಾಡಬಲ್ಲದೇ ಹೊರತು, ಅದಕ್ಕೆ ಮನುಷ್ಯನಂತೆ ದೇಹವಾಗಲಿ, ಸಂತೋಷ–ದುಃಖದ ಭಾವನೆಗಳಾಗಲಿ ಇರುವುದಿಲ್ಲ. ಪ್ರೀತಿ, ಸ್ನೇಹ ಮತ್ತು ಜವಾಬ್ದಾರಿಯ ನಿಜವಾದ ಅರ್ಥ AI ಗೆ ತಿಳಿಯಲು ಸಾಧ್ಯವಿಲ್ಲ ಎಂದು ಪೋಪ್ ಸ್ಪಷ್ಟಪಡಿಸಿದ್ದಾರೆ.

ವ್ಯಾಟಿಕನ್ ಆಯೋಜಿಸಿದ್ದ ಈ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮುಖ AI ಸಂಸ್ಥೆಯಾದ ‘ಆಂಥ್ರೋಪಿಕ’ (Anthropic) ಸಹ–ಸಂಸ್ಥಾಪಕ ಕ್ರಿಸ್ಟೋಫರ್ ಓಲಾ ಕೂಡ ಭಾಗವಹಿಸಿ, ಪೋಪ್ ಅವರ ಕಳಕಳಿಯನ್ನು ಬೆಂಬಲಿಸಿದರು ಮತ್ತು ಭವಿಷ್ಯದಲ್ಲಿ AI ನಿಂದಾಗಿ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ