ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ರಾಜಸ್ಥಾನದಲ್ಲಿ ಮೂವರು ಶೂಟರ್‌ ಗಳ ಬಂಧನ! - Mahanayaka

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ರಾಜಸ್ಥಾನದಲ್ಲಿ ಮೂವರು ಶೂಟರ್‌ ಗಳ ಬಂಧನ!

eknath shinde met tiger shroff
19/10/2026

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಎಸ್‌ಯುವಿ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ದೆಹಲಿ ಹಾಗೂ ಮುಂಬೈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ, ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಇಬ್ಬರು ಹರಿಯಾಣದವರು ಹಾಗೂ ಒಬ್ಬರು ಮಹಾರಾಷ್ಟ್ರದವರಾಗಿದ್ದು, ಈ ಮೂವರೂ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದವರು ಎಂದು ವರದಿಯಾಗಿದೆ.

ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿರುವ ಪುಷ್ಪಾ ಪಾರ್ಕ್ ಸಮೀಪದ ಜೆವಿಪಿಡಿ ಮೈದಾನದಲ್ಲಿ ಫುಟ್‌ ಬಾಲ್ ಆಡಿ ಮರಳುತ್ತಿದ್ದಾಗ, ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಕಾರಿನಿಂದ ಸುಮಾರು 100 ಮೀಟರ್ ದೂರದಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಈ ಘಟನೆಯಲ್ಲಿ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ, ಅವರ ಕಾರು ಚಾಲಕ ಫಿರ್ದೌಸ್ ಅವರ ಎಡಗೈಗೆ ಹಾಗೂ ಪಕ್ಕದಲ್ಲಿದ್ದ ಆಟೋರಿಕ್ಷಾ ಚಾಲಕನಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಟನ ತಂದೆ ಹಿರಿಯ ನಟ ಜಾಕಿ ಶ್ರಾಫ್ ತಮ್ಮ ಪುತ್ರ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದ್ದಾರೆ.

ತನಿಖಾ ಸಂಸ್ಥೆಗಳ ಪ್ರಕಾರ, ದಾಳಿಕೋರರು ನಟನ ವಾರದ ದಿನಚರಿಯನ್ನು ನಿಖರವಾಗಿ ಗಮನಿಸಿದ್ದರು. ಪ್ರತಿ ಭಾನುವಾರ ಟೈಗರ್ ಶ್ರಾಫ್ ಜುಹು ಮೈದಾನಕ್ಕೆ ಭೇಟಿ ನೀಡುವುದನ್ನು ಅರಿತು ಈ ಪೂರ್ವಯೋಜಿತ ಕೃತ್ಯವೆಸಗಿದ್ದಾರೆ. ಗುಂಡಿನ ದಾಳಿಯ ಬಳಿಕ ವಿಲೇ ಪಾರ್ಲೆ ಮತ್ತು ಅಂಧೇರಿ ಮೂಲಕ ಎಸ್‌ವಿ ರಸ್ತೆಯಲ್ಲಿ ಪರಾರಿಯಾದ ಶೂಟರ್‌ಗಳು, ಅಂಧೇರಿ ಪಶ್ಚಿಮ ರೈಲ್ವೆ ನಿಲ್ದಾಣದ ಬಳಿ ಮೋಟಾರ್‌ಸೈಕಲ್ ಬಿಟ್ಟು ಬೋರಿವಲಿ ಕಡೆಗೆ ರೈಲು ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ನಟ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮುಂದುವರಿಸಿದ್ದರಿಂದ ಹಾಗೂ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದರಿಂದಲೇ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಹೇಳಲಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ವ್ಯಕ್ತಿಯೊಬ್ಬರ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದಾಗ್ಯೂ, ಪೊಲೀಸರು ಈ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.

ಘಟನೆಯ ತನಿಖೆಗಾಗಿ ಮುಂಬೈ ಅಪರಾಧ ವಿಭಾಗ ಹಾಗೂ ಸ್ಥಳೀಯ ಪೊಲೀಸರನ್ನೊಳಗೊಂಡ 12 ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿಧಿವಿಜ್ಞಾನ ತಂಡವು ಸ್ಥಳದಿಂದ ಬ್ಯಾಲಿಸ್ಟಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತೀವ್ರ ತನಿಖೆ ನಡೆಯುತ್ತಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸ್ ಆಯುಕ್ತ ದೇವೇನ್ ಭಾರತಿ ಅವರೊಂದಿಗೆ ಚರ್ಚೆ ನಡೆಸಿದ್ದು, ನಟ ಟೈಗರ್ ಶ್ರಾಫ್ ಅವರೊಂದಿಗೆ ಮಾತನಾಡಿ ಆರೋಪಿಗಳನ್ನು ಶೀಘ್ರವೇ ಕಾನೂನಿನ ಕಟಕಟೆಗೆ ತರುವುದಾಗಿ ಭರವಸೆ ನೀಡಿದ್ದಾರೆ.

ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ:

ಮುಂಬೈನ ಹೃದಯಭಾಗದಲ್ಲೇ ಬಾಲಿವುಡ್ ನಟನ ಕಾರಿನ ಮೇಲೆ ಗುಂಡಿನ ದಾಳಿ ನಡೆದಿರುವುದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ ಸಿಪಿ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ, ಸಲ್ಮಾನ್ ಖಾನ್ ನಿವಾಸದ ಮೇಲಿನ ದಾಳಿ ಹಾಗೂ ಚಿತ್ರರಂಗದವರಿಗೆ ನಿರಂತರ ಬೆದರಿಕೆಗಳು ಬರುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯಕ್ಕೆ ಪ್ರತ್ಯೇಕ ಗೃಹ ಸಚಿವರನ್ನು ನೇಮಿಸುವಂತೆ ಒತ್ತಾಯಿಸಿದ್ದು, ಗಣ್ಯರಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಕಥೆಯೇನು ಎಂದು ಪ್ರಶ್ನಿಸಿದ್ದಾರೆ.

ಹದಗೆಡುತ್ತಿರುವ ಕಾನೂನು-ಸುವ್ಯವಸ್ಥೆಯಿಂದ ಮುಂಬೈನಲ್ಲಿ ಹೂಡಿಕೆದಾರರ ವಿಶ್ವಾಸ ಕುಸಿಯಲಿದೆ ಎಂದು ಎಚ್ಚರಿಸಿದ್ದು, ರಾಜ್ಯ ಸರ್ಕಾರವು ಮಹಿಳೆಯರ ಸುರಕ್ಷತೆ, ರೈತರ ಸಮಸ್ಯೆಗಳು ಮತ್ತು ಕಾನೂನು ಸುವ್ಯವಸ್ಥೆಯತ್ತ ತುರ್ತಾಗಿ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler