ನೆಲ್ಯಾಡಿ: ನಿಂತಿದ್ದ ಗ್ಯಾಸ್ ಟ್ಯಾಂಕರ್ ಗೆ ಕಾರು ಡಿಕ್ಕಿ; 16 ವರ್ಷದ ಕಾಲೇಜು ವಿದ್ಯಾರ್ಥಿ ದುರ್ಮರಣ
ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕರ್ಬ ಸಂಕ ಎಂಬಲ್ಲಿ ಅಕ್ಟೋಬರ್ 22ರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ನೆಲ್ಯಾಡಿ ಫ್ಲೇವರ್ಸ್ ಹೋಟೆಲ್ ಮಾಲಕ ಜೋಜೋ ಟಿ. ಜಾರ್ಜ್ ಅವರ ಪುತ್ರ ಅನ್ವಿನ್ ಜೋಜೋ ಜಾರ್ಜ್ (16) ಮೃತಪಟ್ಟ ದುರ್ದೈವಿ.
ಅಕ್ಟೋಬರ್ 22ರ ಮುಂಜಾನೆ ಸುಮಾರು 1 ಗಂಟೆಯ ವೇಳೆಗೆ ಕರ್ಬ ಸಂಕದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ ಗೆ ಆಸ್ಟಿನ್ ಸಂಚರಿಸುತ್ತಿದ್ದ ಕಾರು ಭೀಕರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ತೀವ್ರವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಅನ್ವಿನ್ ಜೋಜೋ ಜಾರ್ಜ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




























