ಇಸ್ರೇಲ್ ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಿಗೂಢ ನಾಪತ್ತೆ: ರಕ್ಷಣೆಗೆ ಕುಟುಂಬಸ್ಥರ ಮನವಿ
ಮಂಗಳೂರು: ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಉದ್ಯೋಗ ವೀಸಾದಡಿ ಇಸ್ರೇಲ್ ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ವ್ಯಕ್ತಿಯನ್ನು ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ಎಂದು ಗುರುತಿಸಲಾಗಿದೆ. ಇವರು ಮೇ 16, 2025ರಂದು ನೇಮಕಾತಿ ಸಂಸ್ಥೆಯೊಂದರ ಮೂಲಕ ಇಸ್ರೇಲ್ ನ ನೊಫ್ ಹಗಲಿಲ್ ನಲ್ಲಿರುವ ‘ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್’ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಶಡ್ರಕ್ ಅವರು ಪ್ರತಿದಿನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅಕ್ಟೋಬರ್ 16, 2026ರಂದು ರಾತ್ರಿ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮೂಲಕ ಮಾತನಾಡಿದ ನಂತರ ಅವರ ಮೊಬೈಲ್ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಕಂಪನಿಯ ಕೆಲಸದ ಸ್ಥಳದಲ್ಲೂ ಅವರು ಕಾಣಿಸದಿರುವುದು ಕುಟುಂಬದವರ ಆತಂಕವನ್ನು ಹೆಚ್ಚಿಸಿದೆ.
ಪತಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ, ಪತ್ನಿ ಡೇಸಿ ಇಮ್ಯಾನುವಲ್ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ. ಜೊತೆಗೆ, ಅಕ್ಟೋಬರ್ 21ರಂದು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ತುರ್ತು ಇಮೇಲ್ ಕಳುಹಿಸಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಕಂಪನಿಯ ನೆರವಿನೊಂದಿಗೆ ಪತ್ತೆ ಕಾರ್ಯ ಚುರುಕುಗೊಳಿಸಿ, ಆಸ್ಪತ್ರೆ ಮತ್ತು ಭದ್ರತಾ ಪಡೆಗಳ ವಶದಲ್ಲಿದ್ದಾರೆಯೇ ಎಂದು ಪರಿಶೀಲಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.




























