ಪುಂಜಾಲಕಟ್ಟೆ: ಮನೆ ಕಳ್ಳತನ ಪ್ರಕರಣ; ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಮಂಜದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳದ ಕೊಲ್ನಾಡು ನಿವಾಸಿಯಾಗಿದ್ದು, ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿರುವ ಹಮೀದ್ ಹಾಗೂ ಜಾಬೀರ್ ಯಾನೆ ಜಾಬಿ (38) ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಏಪ್ರಿಲ್ 5 ರಂದು ಬಳ್ಳಮಂಜದ ಮನೆಯೊಂದರಲ್ಲಿ 6 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಸೇರಿದಂತೆ ಸುಮಾರು 19 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಮೊದಲಿಗೆ ಹಮೀದ್ ನನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದರು. ಆತನಿಂದ ಲಭಿಸಿದ ಪ್ರಮುಖ ಮಾಹಿತಿಯ ಆಧಾರದ ಮೇಲೆ ಜೂನ್ 7ರಂದು ಮತ್ತೊಬ್ಬ ಆರೋಪಿ ಜಾಬೀರ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಬಂಧಿತರಿಂದ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಕಳ್ಳತನಕ್ಕೆ ಸಂಬಂಧಿಸಿದ ಸುಮಾರು 68.690 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ನಗದು ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನಕ್ಕೆ ಸಂಬಂಧಿಸಿದ 21.810 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 23.67 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಉಪ್ಪಿನಂಗಡಿ, ಬಂಟ್ವಾಳ ನಗರ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು ಐದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹನ್ ಸಿ.ಕೆ. ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಉಪ್ಪಿನಂಗಡಿ ಸಿಪಿಐ ನಾಗರಾಜ್ ಹೆಚ್.ಇ., ಪುಂಜಾಲಕಟ್ಟೆ ಪಿಎಸ್‌ಐ ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿಗಳಾದ ಬೆನ್ನಿಚ್ಚನ್, ಸುಂದರ ಶೆಟ್ಟಿ, ವಿಶ್ವನಾಥ್ ನಾಯ್ಕ, ಪ್ರವೀಣ್, ರಾಜೇಶ್, ವಿಜಯ್ ಕುಮಾರ್ ರೈ, ರಾಹುಲ್ ರಾವ್, ಸಂತೋಷ್, ಬಸವರಾಜ್, ರಜಿತ್, ನಾಗರಾಜ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಹಾಗೂ ಸಂಪತ್ ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























