ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ ಹುಟ್ಟುಹಬ್ಬ: ಹೃದಯಸ್ಪರ್ಶಿ ಲೇಖನ ಬರೆದ ಪ್ರಧಾನಿ ನರೇಂದ್ರ ಮೋದಿ - Mahanayaka

ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ ಹುಟ್ಟುಹಬ್ಬ: ಹೃದಯಸ್ಪರ್ಶಿ ಲೇಖನ ಬರೆದ ಪ್ರಧಾನಿ ನರೇಂದ್ರ ಮೋದಿ

pm narendra modi lal krishna advani
08/11/2026

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ರಾಜಕೀಯ ಜೀವನವನ್ನು ಸ್ಮರಿಸಿ ದಿನಪತ್ರಿಕೆಯೊಂದರಲ್ಲಿ ಹೃದಯಸ್ಪರ್ಶಿ ಲೇಖನ ಬರೆದಿದ್ದಾರೆ. ಈ ಲೇಖನದ ಸಾರಾಂಶವನ್ನು ಪ್ರಧಾನಿಯವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

1927ರ ನವೆಂಬರ್ 8ರಂದು ಪ್ರಸ್ತುತ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು 1942ರಲ್ಲಿ ಆರ್ಎಸ್ಎಸ್ ಸೇರಿದರು. 1947ರ ದೇಶ ವಿಭಜನೆಯ ನಂತರ ಭಾರತಕ್ಕೆ ಮರಳಿ ಶೂನ್ಯದಿಂದ ತಮ್ಮ ಜೀವನವನ್ನು ಕಟ್ಟಿಕೊಂಡರು. ಅವರ ಈ ಧೈರ್ಯ ಮತ್ತು ಸಂಕಲ್ಪವೇ ನಂತರದ ದಿನಗಳಲ್ಲಿ ಭಾರತೀಯ ಜನಸಂಘವನ್ನು ಬಲಪಡಿಸಲು ಮತ್ತು ಬಿಜೆಪಿಯನ್ನು ಸ್ಥಾಪಿಸಲು ಭದ್ರ ಅಡಿಪಾಯವಾಯಿತು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಅಡ್ವಾಣಿ ಅವರು ಪಕ್ಷದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ‘ರಾಷ್ಟ್ರ ಮೊದಲು’ ಎಂಬ ತತ್ವದ ಮೇಲೆ ಕಾರ್ಯಕರ್ತರ ತಲೆಮಾರುಗಳನ್ನು ರೂಪಿಸಿದರು. ಅವರ ಸಾರಥ್ಯದಲ್ಲೇ 1989ರಲ್ಲಿ ಕಾಂಗ್ರೆಸ್ ಸ್ಥಾನಗಳು 400ರಿಂದ 200ಕ್ಕಿಂತ ಕೆಳಗೆ ಕುಸಿದವು ಮತ್ತು 1996ರಲ್ಲಿ ಬಿಜೆಪಿ ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತು. ಅಡ್ವಾಣಿ ಅವರ ಶಾಂತ ಸ್ವಭಾವ, ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬೌದ್ಧಿಕ ತೀಕ್ಷ್ಣತೆಯು ಭಾರತೀಯ ರಾಜಕಾರಣದಲ್ಲಿ ಹಲವು ವರ್ಷಗಳಿಂದ ಪ್ರತಿಪಾದಿಸಲ್ಪಡುತ್ತಿದ್ದ ‘ನಕಲಿ ಜಾತ್ಯತೀತತೆ’ಯನ್ನು ಅನಾವರಣಗೊಳಿಸಿತು.

ಆರ್ಎಸ್ಎಸ್ ಪ್ರಚಾರಕರಾಗಿ ರಾಜಸ್ಥಾನದಲ್ಲಿ ಸೇವೆ ಆರಂಭಿಸಿ ನಂತರ ದೆಹಲಿಗೆ ಬಂದ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಕೈಜೋಡಿಸಿದರು. ಈ ಇಬ್ಬರು ದಿಗ್ಗಜರು ಪರಸ್ಪರ ಸ್ಪರ್ಧಿಗಳಾಗದೆ ದಶಕಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದು ಭಾರತೀಯ ರಾಜಕೀಯದ ದಿಸೆಯನ್ನೇ ಬದಲಿಸಿತು. 1967ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ ಅಧ್ಯಕ್ಷರಾಗಿದ್ದ ಅಡ್ವಾಣಿ, 1970ರಲ್ಲಿ ಸಂಸತ್ತಿಗೆ ಆಯ್ಕೆಯಾಗಿ ವಿರೋಧ ಪಕ್ಷದ ನಾಯಕರಾಗಿಯೂ, ಆಡಳಿತ ಪಕ್ಷದ ಭಾಗವಾಗಿಯೂ ಅತ್ಯುತ್ತಮ ಸೇವೆ ಸಲ್ಲಿಸಿದರು.

1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ ಅವರು, ತಮ್ಮ ‘ಎ ಪ್ರಿಸನರ್ಸ್ ಸ್ಕ್ರ್ಯಾಪ್ ಬುಕ್’ ಪುಸ್ತಕದಲ್ಲಿ ಆ ಕರಾಳ ದಿನಗಳನ್ನು ದಾಖಲಿಸಿದ್ದಾರೆ. ಅದರಲ್ಲಿ 1975ರ ಭಾರತದ ಘಟನೆಗಳನ್ನು 1933ರ ನಾಜಿ ಜರ್ಮನಿಯ ಬೆಳವಣಿಗೆಗಳಿಗೆ ಹೋಲಿಸಿದ್ದಾರೆ. ಸೋಮನಾಥದಿಂದ ಅಯೋಧ್ಯೆಯವರೆಗೆ ಅವರು ನಡೆಸಿದ ಐತಿಹಾಸಿಕ ರಥಯಾತ್ರೆಯು ರಾಮಮಂದಿರ ನಿರ್ಮಾಣದ ಹೋರಾಟಕ್ಕೆ ಹೊಸ ತಿರುವು ನೀಡಿತು.

ಅತಿ ದೀರ್ಘಕಾಲ ಬಿಜೆಪಿ ಅಧ್ಯಕ್ಷರಾಗಿ, ದೇಶದ ಗೃಹ ಸಚಿವರಾಗಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅಡ್ವಾಣಿ ಅವರು ದೇಶದ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶಕ್ಕೆ ಅವರು ನೀಡಿದ ಈ ಅಸಾಧಾರಣ ಕೊಡುಗೆಯನ್ನು ಗೌರವಿಸಿ 2024ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler