ನಿರುದ್ಯೋಗಿ ಮಗನನ್ನು ಆ್ಯಸಿಡ್ ಕುಡಿಸಿ ಕೊಂದ ತಂದೆ ತಾಯಿ! - Mahanayaka

ನಿರುದ್ಯೋಗಿ ಮಗನನ್ನು ಆ್ಯಸಿಡ್ ಕುಡಿಸಿ ಕೊಂದ ತಂದೆ ತಾಯಿ!

ram bambhava
04/07/2026

ರಾಜ್‌ ಕೋಟ್: ಮಗನ ನಿರಂತರ ಕುಡಿತದ ಗಲಾಟೆ ಹಾಗೂ ನಿರುದ್ಯೋಗದಿಂದ ಬೇಸತ್ತ ಹೆತ್ತ ಪೋಷಕರೇ ಆತನಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿ, ಗಂಟಲು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಗುಜರಾತ್‌ ನ ರಾಜ್‌ಕೋಟ್ ಜಿಲ್ಲೆಯ ಗೊಂಡಲ್ ತಾಲೂಕಿನ ಗುಂಡಾಲ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿಯನ್ನು ರಾಮ್ ಬಾಂಬ್ವಾ (22) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ ತಂದೆ ಬಾಬು ಅಲಿಯಾಸ್ ಅತುಲ್ ಬಾಂಬ್ವಾ (47) ಮತ್ತು ತಾಯಿ ಮನಿಷಾ ಅಲಿಯಾಸ್ ಮೋತಿ ಬಾಂಬ್ವಾ (45) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ರಾಮ್‌ ಗೆ ಕೇವಲ ಐದು ತಿಂಗಳ ಹಿಂದೆಯಷ್ಟೇ ಬನ್ಸಿ (20) ಎಂಬಾಕೆಯೊಂದಿಗೆ ವಿವಾಹವಾಗಿತ್ತು. ರಾಮ್ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ ಹಾಗೂ ಪ್ರತಿದಿನ ಕುಡಿದು ಬಂದು ತಂದೆಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಜೂನ್ 30 ರಂದು ಸಹ ರಾಮ್ ಕುಡಿದ ಮತ್ತಿನಲ್ಲಿ ತಂದೆಯೊಂದಿಗೆ ತೀವ್ರವಾಗಿ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ತಾಯಿ ಮನಿಷಾ ಮಗನ ಬಾಯಿಗೆ ಬಲವಂತವಾಗಿ ಆ್ಯಸಿಡ್ ಸುರಿದಿದ್ದಾರೆ. ಆತ ಒದ್ದಾಡಲು ತೊಡಗಿದಾಗ ತಂದೆ ಬಾಬು ಆತನ ಬಾಯಿ ಮುಚ್ಚಿ, ಗಂಟಲು ಹಿಸುಕಿ ಕೊಲೆ ಮಾಡಿದ್ದಾರೆ.

ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ:

ಕೊಲೆಯ ನಂತರ ಪೋಷಕರು ಮಗ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಲ್ಲರನ್ನು ನಂಬಿಸಿದ್ದರು. ಅಲ್ಲದೆ ಘಟನೆಯ ಬಗ್ಗೆ ಯಾರಿಗೂ ಬಾಯಿ ಬಿಡದಂತೆ ಸೊಸೆ ಬನ್ಸಿಗೆ ಬೆದರಿಕೆ ಹಾಕಿದ್ದರು. ಆದರೆ ರಾಮ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಮೃತದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯದ (Forensic) ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಮ್ ಸಾವು ಆ್ಯಸಿಡ್ ಕುಡಿದಿದ್ದರಿಂದ ಸಂಭವಿಸಿಲ್ಲ, ಬದಲಿಗೆ ಗಂಟಲು ಹಿಸುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಇದಾದ ಬಳಿಕ ಮೃತನ ಪತ್ನಿ ಬನ್ಸಿ ನೀಡಿದ ದೂರಿನ ಆಧಾರದ ಮೇಲೆ ಗೊಂಡಲ್ ತಾಲೂಕು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪೋಷಕರನ್ನು ಬಂಧಿಸಿದ್ದಾರೆ. ಸ್ಥಳದಿಂದ ಆ್ಯಸಿಡ್ ಬಾಟಲಿ ಹಾಗೂ ಇತರೆ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ