ಎಐ ಬಳಸಿ ಮೂವರನ್ನು ಕೊಂದ ಪಾಪಿ: ಬೆಂಗಳೂರು ತ್ರಿವಳಿ ಮರ್ಡರ್ ಗೆ ಹೊಸ ಟ್ವಿಸ್ಟ್ - Mahanayaka

ಎಐ ಬಳಸಿ ಮೂವರನ್ನು ಕೊಂದ ಪಾಪಿ: ಬೆಂಗಳೂರು ತ್ರಿವಳಿ ಮರ್ಡರ್ ಗೆ ಹೊಸ ಟ್ವಿಸ್ಟ್

Shwetha J Kenneth.jpg
02/07/2026

ಬೆಂಗಳೂರು: ರಾಜಧಾನಿಯ ಕಾಡುಗೋಡಿಯಲ್ಲಿ ಇತ್ತೀಚೆಗೆ ನಡೆದಿದ್ದ ಒಂದೇ ಕುಟುಂಬದ ಮೂವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಿಂದ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಸಾಲದ ಬಾಧೆ ಹಾಗೂ ಐಷಾರಾಮಿ ಜೀವನದ ವ್ಯಾಮೋಹದಲ್ಲಿದ್ದ ಸಾಫ್ಟ್ವೇರ್ ಇಂಜಿನಿಯರ್ ಜೆ. ಕೆನೆತ್, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವು ಪಡೆದು ಈ ತ್ರಿವಳಿ ಕೊಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿ, ಒಬ್ಬನೇ ಕೃತ್ಯ ಎಸಗಿದ್ದಾನೆ ಎಂದು ವರದಿ ತಿಳಿಸಿದೆ.
ಆರೋಪಿ ಕೆನೆತ್, ಮನುಷ್ಯನ ದೇಹದ ಯಾವ ಭಾಗಕ್ಕೆ ಚಾಕುವಿನಿಂದ ಇರಿದರೆ ತೀವ್ರ ಗಾಯಗಳಾಗುತ್ತವೆ ಮತ್ತು ಯಾವ ರೀತಿಯ ಗಾಯಗಳು ತಕ್ಷಣವೇ ಜೀವಹಾನಿ ಉಂಟುಮಾಡಬಹುದು (fatal injuries) ಎಂಬುದರ ಕುರಿತು ಎಐ (AI) ಮೂಲಕ ಮಾಹಿತಿ ಪಡೆದುಕೊಂಡಿದ್ದ ಎನ್ನಲಾಗಿದೆ.

ವರದಿಗಳ ಪ್ರಕಾರ, ಆರೋಪಿ ಕೆನೆತ್ ನ ಐಷಾರಾಮಿ ಜೀವನಕ್ಕಾಗಿ ಅವನ ಲಿವ್–ಇನ್ ಪಾರ್ಟ್ನರ್ ಆಗಿದ್ದ ಶ್ವೇತಾ (ಈಕೆಯೂ ಸಾಫ್ಟ್ ವೇರ್ ಇಂಜಿನಿಯರ್) ಸುಮಾರು 56 ಲಕ್ಷ ರೂಪಾಯಿ ಸಾಲ ಮಾಡಿದ್ದಳು. ಸಾಲದ ಇಎಂಐ (EMI) ಕಟ್ಟದ ಕಾರಣ ಬ್ಯಾಂಕ್ ನಿಂದ ಶ್ವೇತಾ ತಂದೆ ಸೋಮಸುಂದರ್ ಅವರ ಮನೆಗೆ ನೋಟಿಸ್ ಗಳು ಬರಲು ಪ್ರಾರಂಭವಾಗಿದ್ದವು. ಈ ವಿಷಯವಾಗಿ ಶ್ವೇತಾ ಪೋಷಕರು ಇಬ್ಬರನ್ನೂ ಪದೇ ಪದೇ ಪ್ರಶ್ನಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಕೆನೆತ್, “ಅವರನ್ನು ಮುಗಿಸಿಬಿಡೋಣ” ಎಂದು ಶ್ವೇತಾ ಬಳಿ ಹೇಳಿದ್ದ ಎನ್ನಲಾಗಿದೆ. ಇದರ ನಡುವೆ ಕೆನೆತ್ ಗೆ ಕೇರಳ ಮೂಲದ ಮತ್ತೊಬ್ಬ ಗರ್ಲ್ಫ್ರೆಂಡ್ ಇದ್ದ ವಿಷಯವೂ ಶ್ವೇತಾಗೆ ತಿಳಿದು ಇಬ್ಬರ ನಡುವೆ ಜಗಳ ನಡೆದಿತ್ತು.

ಘಟನೆ ನಡೆದಿದ್ದು ಹೇಗೆ?

ಜೂನ್ 22 ರಂದು ಕೆನೆತ್ ಮೊದಲು ಶ್ವೇತಾಳ ತಾಯಿ ಮುತ್ತುಲಕ್ಷ್ಮಿ ಅವರನ್ನು ಮಾತ್ರ ಕೊಲೆ ಮಾಡಿ ಶವ ವಿಲೇವಾರಿ ಮಾಡಲು ಯೋಜಿಸಿದ್ದನು. ಅದರಂತೆ ಸೋಫಾದಲ್ಲಿ ಟಿವಿ ನೋಡುತ್ತಿದ್ದ ಮುತ್ತುಲಕ್ಷ್ಮಿ ಅವರಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಂದಿದ್ದಾನೆ. ಈ ವೇಳೆ ಶ್ವೇತಾ ದೂರ ನಿಂತು ನೋಡುತ್ತಿದ್ದಳು ಎನ್ನಲಾಗಿದೆ.
ಆದರೆ, ಅಷ್ಟರಲ್ಲೇ ಶ್ವೇತಾಳ ತಂದೆ ಸೋಮಸುಂದರ್ ಮತ್ತು ತಂಗಿ ಸುಪ್ರಿಯಾ (20 ವರ್ಷ) ನಿರೀಕ್ಷೆಗಿಂತ ಒಂದು ಗಂಟೆ ಮುಂಚಿತವಾಗಿ ಮನೆಗೆ ಬಂದಿದ್ದಾರೆ. ಗಾಬರಿಗೊಂಡ ಆರೋಪಿಗಳು ಮುತ್ತುಲಕ್ಷ್ಮಿ ಶವವನ್ನು ಬೆಡ್ ರೂ ಮ್ಗೆ ಎಳೆದೊಯ್ದಿದ್ದಾರೆ. ತಂದೆ ಸೋಮಸುಂದರ್ ಒಳಗೆ ಬರುತ್ತಿದ್ದಂತೆ ಕೆನೆತ್ ಅವರ ಬೆನ್ನಿಗೆ ಇರಿದಿದ್ದಾನೆ. ಸೋಮಸುಂದರ್ ಕೆನೆತ್ ಎದುರು ತಿರುಗಿ ಬಿದ್ದು, ಕಿರುಚುತ್ತಾ ಕಾರಿಡಾರ್ ಗೆ ಓಡಿದ್ದಾರೆ. ಇತ್ತ ಮನೆಯೊಳಗೆ ಕಿರುಚುತ್ತಿದ್ದ ಶ್ವೇತಾಳ ತಂಗಿ ಸುಪ್ರಿಯಾಳ ಬಾಯಿ ಮುಚ್ಚಿ ಶ್ವೇತಾ ಹಿಡಿದುಕೊಂಡರೆ, ಕೆನೆತ್ ಆಕೆಯ ಕುತ್ತಿಗೆ ಮತ್ತು ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸೋಮಸುಂದರ್ ಕುಸಿದು ಬೀಳುವ ಮುನ್ನ ನೆರೆಹೊರೆಯವರಿಗೆ ಕೊಲೆಗಡುಕರ ಬಗ್ಗೆ ಮಾಹಿತಿ ನೀಡಿದ್ದರು. ಕೃತ್ಯದ ಬಳಿಕ ಕೆನೆತ್ ಮತ್ತು ಶ್ವೇತಾ ಬೈಕ್ನಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದರು. ತಿರುವಣ್ಣಾಮಲೈ ಬಳಿ ಬೈಕ್ ಕೆಟ್ಟು ನಿಂತಾಗ, ಅಲ್ಲಿಂದ ಬಸ್ ಹತ್ತಿ ಪುದುಚೇರಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಸದ್ಯ ವೈಟ್ಫೀಲ್ಡ್ ಡಿಸಿಸಿಪಿ ಸೈದುಲು ಅದಾವತ್ ನೇತೃತ್ವದ ಪೊಲೀಸರು ಇಬ್ಬರನ್ನೂ ಪುದುಚೇರಿಯಲ್ಲಿ ಬಂಧಿಸಿದ್ದು, ಸ್ಥಳ ಮಹಜರು ಪ್ರಕ್ರಿಯೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ