ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ದರ ದುಪ್ಪಟ್ಟು ಏರಿಕೆ: ಟ್ಯಾಕ್ಸಿ ಚಾಲಕರಿಂದ ತೀವ್ರ ಆಕ್ರೋಶ, ದರ ಇಳಿಕೆಗೆ ಒತ್ತಾಯ - Mahanayaka

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ದರ ದುಪ್ಪಟ್ಟು ಏರಿಕೆ: ಟ್ಯಾಕ್ಸಿ ಚಾಲಕರಿಂದ ತೀವ್ರ ಆಕ್ರೋಶ, ದರ ಇಳಿಕೆಗೆ ಒತ್ತಾಯ

mangalore airport
02/07/2026

ವಿಶೇಷ ವರದಿ: ಕಮಲಾಕ್ಷ ಬಜಾಲ್

ಬಜ್ಪೆ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರವು ಖಾಸಗಿ ಒಡೆತನದ ಅದಾನಿ ಸಂಸ್ಥೆಗೆ ನಿರ್ವಹಣೆಗೆ ನೀಡಿದ ದಿನದಿಂದಲೂ ಒಂದಲ್ಲ ಒಂದು ವಿವಾದಗಳು ಕೇಳಿಬರುತ್ತಲೇ ಇವೆ. ಆರಂಭದಲ್ಲಿ ‘ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂಬ ಹೆಸರನ್ನು ‘ಅದಾನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬದಲಾಯಿಸಲು ಸಂಸ್ಥೆ ಮುಂದಾಗಿತ್ತು. ಆದರೆ, ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರ ತೀವ್ರ ವಿರೋಧದ ಬಳಿಕ ಎಚ್ಚೆತ್ತ ಸಂಸ್ಥೆಯು ಹೆಸರನ್ನು ಯಥಾಸ್ಥಿತಿಗೆ ತಂದಿತ್ತು. ಇದೀಗ ವಿಮಾನ ನಿಲ್ದಾಣದ ಪಾರ್ಕಿಂಗ್ ದರ ಏರಿಕೆ ವಿಚಾರವಾಗಿ ಮತ್ತೊಂದು ವಿವಾದ ಭುಗಿಲೆದ್ದಿದೆ.

ಉಚಿತ ಸಮಯ ಕಡಿತ, ಹಂತ ಹಂತವಾಗಿ ದರ ಏರಿಕೆ:

ಹಿಂದೆ ವಿಮಾನ ನಿಲ್ದಾಣವನ್ನು ಸರ್ಕಾರ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ವಾಣಿಜ್ಯ ವಾಹನಗಳಿಗೆ 10 ನಿಮಿಷ ಉಚಿತ ಡ್ರಾಪ್ ಹಾಗೂ 7 ನಿಮಿಷ ಉಚಿತ ಪಿಕಪ್ ಸಮಯ ನೀಡಲಾಗಿತ್ತು. ಆದರೆ ಅದಾನಿ ಸಂಸ್ಥೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಗ್ರಾಹಕರನ್ನು ಪಿಕಪ್ ಮಾಡುವ 7 ನಿಮಿಷದ ಉಚಿತ ಸಮಯವನ್ನು ಸಂಪೂರ್ಣವಾಗಿ ತೆಗೆದುಹಾಕಿತು. ಅಷ್ಟೇ ಅಲ್ಲದೆ, ಈ ಹಿಂದೆ 60 ರೂಪಾಯಿ ಇದ್ದ ಪಾರ್ಕಿಂಗ್ ದರವನ್ನು ಒಮ್ಮೆಲೇ 90 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದಾದ ಕೇವಲ ನಾಲ್ಕೇ ತಿಂಗಳಲ್ಲಿ “ಚಿಲ್ಲರೆ ಸಮಸ್ಯೆ” ನೆಪವೊಡ್ಡಿ 90 ರೂಪಾಯಿ ಇದ್ದ ದರವನ್ನು 100 ರೂಪಾಯಿಗೆ ಹೆಚ್ಚಿಸಲಾಯಿತು. ಇದು ಟ್ಯಾಕ್ಸಿ ಚಾಲಕರಿಗೆ ಹೊರೆಯಾಗಿದ್ದರೂ, ಚಾಲಕರು ಹೆಚ್ಚಿನ ವಿರೋಧ ವ್ಯಕ್ತಪಡಿಸದೆ ಸುಮ್ಮನಿದ್ದರು.

ದಿಢೀರ್ ದುಪ್ಪಟ್ಟು ಏರಿಕೆ – ಜೇಬಿಗೆ ಕತ್ತರಿ:

ಆದರೆ ನಿನ್ನೆ (ಜುಲೈ 1, 2026) ಸಂಜೆಯ ನಂತರ ಅದಾನಿ ಸಂಸ್ಥೆಯು ದಿಢೀರನೆ ಪಾರ್ಕಿಂಗ್ ದರವನ್ನು ದುಪ್ಪಟ್ಟುಗೊಳಿಸಿದೆ. 100 ರೂಪಾಯಿ ಇದ್ದ ದರವನ್ನು ಒಮ್ಮೆಲೇ 180 ರೂಪಾಯಿಗೆ ಏರಿಕೆ ಮಾಡುವ ಮೂಲಕ ಬರೋಬ್ಬರಿ 80 ರೂಪಾಯಿಗಳ ಭಾರ ಹೊರಿಸಿದೆ. ಈ ದಿಢೀರ್ ನಿರ್ಧಾರದಿಂದ ಟ್ಯಾಕ್ಸಿ ಚಾಲಕರು ಮತ್ತು ಗ್ರಾಹಕರು ತೀವ್ರ ಆಕ್ರೋಶಗೊಂಡಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಚಾಲಕರು:

ಒಂದೆಡೆ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮದಿಂದಾಗಿ ಡೀಸೆಲ್ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬಾಡಿಗೆಗಳು ಕಡಿಮೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆ, ವಾಹನ ದುರಸ್ತಿ, ಇನ್ಶೂರೆನ್ಸ್ (ವಿಮೆ), ಪಾನಿಕ್ ಬಟನ್ ಅಳವಡಿಕೆ ಹಾಗೂ ಮಕ್ಕಳ ಶಾಲಾ ಖರ್ಚುಗಳನ್ನು ನಿಭಾಯಿಸಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ಈಗ ಏರ್ಪೋರ್ಟ್ ಪಾರ್ಕಿಂಗ್ ದರವೂ ಗಗನಕ್ಕೇರಿರುವುದರಿಂದ ವಿಮಾನ ನಿಲ್ದಾಣದ ಬಾಡಿಗೆಯನ್ನು ಹೇಗೆ ಒಪ್ಪಿಕೊಳ್ಳಬೇಕು ಎಂಬ ಗೊಂದಲ ಮತ್ತು ನೋವನ್ನು ಚಾಲಕರು ಹಂಚಿಕೊಂಡಿದ್ದಾರೆ.

ಹಾಗಾಗಿ, ಅದಾನಿ ಸಂಸ್ಥೆಯು ಜನಸಾಮಾನ್ಯರ ಹಾಗೂ ಚಾಲಕರ ಹಿತದೃಷ್ಟಿಯಿಂದ ಈಗ ಹೆಚ್ಚಿಸಿರುವ ಪಾರ್ಕಿಂಗ್ ದರವನ್ನು ಕೂಡಲೇ ಹಿಂಪಡೆದು, ಹಳೆಯ ದರವನ್ನು ಮರುಸ್ಥಾಪಿಸಬೇಕು ಎಂದು ನೊಂದ ಟ್ಯಾಕ್ಸಿ ಚಾಲಕರು ಮಾಧ್ಯಮಗಳ ಮೂಲಕ ತೀವ್ರವಾಗಿ ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ