ವೇಣೂರು: ಎಸ್‌ ಐಆರ್ ಕರ್ತವ್ಯಕ್ಕೆ ತೆರಳಿದ್ದ ದಲಿತ ಬಿ.ಎಲ್.ಒಗೆ ಜಾತಿ ನಿಂದನೆ; ಪ್ರಕರಣ ದಾಖಲು - Mahanayaka

ವೇಣೂರು: ಎಸ್‌ ಐಆರ್ ಕರ್ತವ್ಯಕ್ಕೆ ತೆರಳಿದ್ದ ದಲಿತ ಬಿ.ಎಲ್.ಒಗೆ ಜಾತಿ ನಿಂದನೆ; ಪ್ರಕರಣ ದಾಖಲು

sir
08/07/2026

ಬೆಳ್ತಂಗಡಿ: ಸರ್ಕಾರಿ ಕರ್ತವ್ಯದ (ಎಸ್‌ಐಆರ್) ಭಾಗವಾಗಿ ಮನೆಗೆ ಭೇಟಿ ನೀಡಿದ್ದ ದಲಿತ ಸಮುದಾಯಕ್ಕೆ ಸೇರಿದ ಬಿ.ಎಲ್.ಒ (ಬೂತ್ ಮಟ್ಟದ ಅಧಿಕಾರಿ) ಅವರಿಗೆ ಜಾತಿ ನಿಂದನೆ ಮಾಡಿ, ಅಪಮಾನಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಪಲ್ಲದೋಡಿ ಎಂಬಲ್ಲಿ ನಡೆದಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯಾಗಿರುವ ಸಂತ್ರಸ್ತೆ, ಬಿ.ಎಲ್.ಒ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜುಲೈ 6ರಂದು ಅವರು ಎ.ಎಲ್.ಒ ಮಾಧವ ಎಂಬವರ ಜೊತೆಗೂಡಿ ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿಯಾದ ಯಶೋಧ ಆಚಾರಿ ಎಂಬವರ ಮನೆಗೆ ಅಧಿಕೃತ ಕೆಲಸದ ನಿಮಿತ್ತ ತೆರಳಿದ್ದರು.

ಅವರು ಮನೆಯ ಅಂಗಳಕ್ಕೆ ಪ್ರವೇಶಿಸಿದಾಗ, ಮನೆಯ ಯಜಮಾನಿ ಯಶೋಧ ಆಚಾರಿ ಅವರು, “ನೀನು ಅಲ್ಲಿಯೇ ನಿಲ್ಲು, ನಿಮ್ಮ ಜಾತಿಯವರು ಈ ಕಡೆ ಬರಬಾರದು” ಎಂದು ಹೇಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿ.ಎ.ಲ್.ಒ ಅವರನ್ನು ಮನೆಯ ಸಿಟ್-ಔಟ್‌ಗೆ ಪ್ರವೇಶಿಸದಂತೆ ಮೆಟ್ಟಿಲ ಬಳಿಯೇ ಮಾತಿನಲ್ಲೇ ತಡೆದು ನಿಲ್ಲಿಸಿ ಅಪಮಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯಶೋಧ ಆಚಾರಿ ಅವರು ತಮಗೆ ಜಾತಿ ನಿಂದನೆ ಮಾಡಿ, ಸಾರ್ವಜನಿಕವಾಗಿ ಅಪಮಾನ ಮಾಡಿದ್ದಾರೆ ಎಂದು ಬಿ.ಎಲ್.ಒ ಅವರು ಜುಲೈ 7ರಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸರು ಆರೋಪಿ ಯಶೋಧ ಆಚಾರಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ (SC/ST act-2015, u/s-3(1)(r), 3(2)(va)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ