ಬಸ್ ನಿಲ್ದಾಣದಿಂದ ಯುವತಿ ಅಪಹರಿಸಿ ಲಾಡ್ಜ್ ನಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ: ಮೂವರು ಆರೋಪಿಗಳ ಬಂಧನ
ಮೈಸೂರು: ಬಸ್ ನಿಲ್ದಾಣದಿಂದ ಯುವತಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿ, ಲಾಡ್ಜ್ ಒಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಗಂಭೀರ ಪ್ರಕರಣ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಿ.ನರಸೀಪುರ ಪಟ್ಟಣದ ಕಿರಣ್ ಅಲಿಯಾಸ್ ಹುಚ್ಚ, ರಿಹಾನ್ ಖಾನ್ ಹಾಗೂ ಕಿಶೋರ್ ಕುಮಾರ್ ಎಂದು ಗುರುತಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ 30 ವರ್ಷದ ಯುವತಿ, ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಮೈಸೂರಿಗೆ ತೆರಳಿ ಭಾನುವಾರ ರಾತ್ರಿ ತಿ.ನರಸೀಪುರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ನಿಲ್ದಾಣದಲ್ಲಿದ್ದ ಯುವತಿಯನ್ನು ಕಾರಿನಲ್ಲಿ ಬಂದ ಆರೋಪಿಗಳು ಬಲವಂತವಾಗಿ ಅಪಹರಿಸಿ, ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಬಳಿಯಿದ್ದ ಲಾಡ್ಜ್ ಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಕೃತ್ಯದ ಬಳಿಕ ಯುವತಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಬಳಿಯಿದ್ದ ₹5,000 ನಗದು ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಮಹಿಳೆಯು ಹಣ ಮನೆಯಲ್ಲಿದ್ದು, ನನ್ನನ್ನು ಮನೆಗೆ ಕರೆದೊಯ್ದರೆ ಹಣ ನೀಡುವುದಾಗಿ ತಿಳಿಸಿದ್ದರು. ನಂತರ ಆರೋಪಿಗಳು, ಮಹಿಳೆಯನ್ನು ಅದೇ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದರು. ಕಾರಿನಿಂದ ಇಳಿದು ತಕ್ಷಣವೇ ಮನೆಯೊಳಗೆ ಹೋಗಿ ಸಂತ್ರಸ್ತೆ ಬಾಗಿಲು ಹಾಕಿಕೊಂಡಿದ್ದಳು. ನಂತರ ಸಹಾಯಕ್ಕಾಗಿ ಮನೆ ಮಾಲೀಕರು ಮತ್ತು ಅಕ್ಕಪಕ್ಕದವರನ್ನು ಕೂಗಿದ್ದರಿಂದ ಆರೋಪಿಗಳು ಪರಾರಿಯಾಗಿದ್ದರು. ತಕ್ಷಣ ಮನೆಯ ಮಾಲೀಕರ ಸಹಾಯದಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿ, ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಲಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























