ಹಿರಿಯ ದಲಿತ ಮುಖಂಡ, ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ನಿಧನ - Mahanayaka

ಹಿರಿಯ ದಲಿತ ಮುಖಂಡ, ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ನಿಧನ

m devadas
22/07/2026

ಮಂಗಳೂರು: ಕರಾವಳಿಯಲ್ಲಿ ದಲಿತ ಹಕ್ಕುಗಳ ಹೋರಾಟದ ದನಿಯಾಗಿದ್ದ, ದಲಿತ ಸಂಘರ್ಷ ಸಮಿತಿಯ (ಡಿ.ಎಸ್.ಎಸ್.) ಸಂಸ್ಥಾಪಕರಲ್ಲಿ ಪ್ರಮುಖರೂ ಹಾಗೂ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಹಿರಿಯ ದಲಿತ ಮುಖಂಡ ಎಂ. ದೇವದಾಸ್ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಜುಲೈ 12ರ ಮುಂಜಾನೆ ದಿಢೀರ್ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿತ್ತಾದರೂ, ಬುಧವಾರ ಮುಂಜಾನೆ 3:30ರ ಸುಮಾರಿಗೆ ರಕ್ತದೊತ್ತಡದ ತೀವ್ರ ಏರಿಳಿತದಿಂದಾಗಿ ಅವರು ಕೊನೆಯುಸಿರೆಳೆದರು.

ದಲಿತ ಚಳವಳಿಯ ಸಾಕ್ಷಿ ಪ್ರಜ್ಞೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ಅಡಿಪಾಯ ಹಾಕುವಲ್ಲಿ ಎಂ. ದೇವದಾಸ್ ಅವರ ಪಾತ್ರ ಅಪಾರವಾದದ್ದು. ಸಕಲೇಶಪುರದ ಹಾಡ್ಯದ ಜಿ. ಸೋಮಶೇಖರ್ ಅವರು ಮಂಗಳೂರಿನ ‘ನವಭಾರತ’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ದೇವದಾಸ್ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಡಿ.ಎಸ್.ಎಸ್. ಶಾಖೆ ಪ್ರಾರಂಭಿಸಲು ಪ್ರೇರೇಪಿಸಿದ್ದರು. ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗೂ ದಲಿತ ಸಂಘರ್ಷ ಸಮಿತಿಯ ತತ್ವ ಹಾಗೂ ಹೋರಾಟದ ಕಿಚ್ಚನ್ನು ಪಸರಿಸಲು ದೇವದಾಸ್ ಅವರು ಶ್ರಮಿಸಿದರು. ಕರಾವಳಿ ಭಾಗದ ದಲಿತ ಚಳವಳಿಯ ಸಾಕ್ಷಿ ಪ್ರಜ್ಞೆಯಾಗಿದ್ದ ಅವರು, ಶೋಷಿತರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿ-ಬಂಧುವರ್ಗವನ್ನು ಅಗಲಿದ್ದಾರೆ.

ಇಂದು ಸಂಜೆ ಅಂತಿಮ ಸಂಸ್ಕಾರ:

ಅವರ ಪಾರ್ಥಿವ ಶರೀರವನ್ನು ಬಜಪೆಯ ಸಿದ್ಧಾರ್ಥ ನಗರದಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 2:00 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಸಂಜೆ 4:00 ಗಂಟೆಗೆ ಸಿದ್ಧಾರ್ಥ ನಗರದಲ್ಲೇ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ನೆರವೇರಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ