ಬಾಲಕನಿಗೆ ಕಚ್ಚಿದ ನಾಯಿ: ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಬಾಲಕ ಬಲಿ - Mahanayaka
5:10 AM Saturday 14 - December 2024

ಬಾಲಕನಿಗೆ ಕಚ್ಚಿದ ನಾಯಿ: ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಬಾಲಕ ಬಲಿ

death
17/11/2022

ನಾಯಿಯಿಂದ ಕಡಿತಕ್ಕೊಳಗಾದ ಬಾಲಕನಿಗೆ ವೈದ್ಯರು ಸರಿಯಾದ ಸಮಯಕ್ಕೆ ರೇಬಿಸ್ ಲಸಿಕೆ ಹಾಕದ ಕಾರಣ ಐದು ವರ್ಷದ ಬಾಲಕ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊರಟಾಲದಿನ್ನೆ ಗ್ರಾಮದ ಫೈರೋಜ್ ಮತ್ತು ಫಾಮಿದಾ ದಂಪತಿಯ ಪುತ್ರ ಸಮೀರ್ ಬಾಷಾ ಮೃತ ಬಾಲಕ. ಸುದ್ದಿ ತಿಳಿಯುತ್ತಿದ್ದಂತೆ ಬಾಲಕನ ಪೋಷಕರು ಸೇರಿದಂತೆ ಸಾರ್ವಜನಿಕರು ಹೊಸೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಅಕ್ಟೋಬರ್ 30ರಂದು ಬಾಲಕ ಮನೆಯ ಅಕ್ಕಪಕ್ಕ ಆಟವಾಡುತ್ತಿದ್ದಾಗ ನಾಯಿ ಕಚ್ಚಿತ್ತು. ಕೂಡಲೇ ಪೋಷಕರು  ಹೊಸೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಚುಚ್ಚುಮದ್ದು ನೀಡಿ ವಾಪಸ್ ಕಳುಹಿಸಿದ್ದಾರೆ. ಆದರೆ ಬಾಲಕ ಚೇತರಿಸಿಕೊಳ್ಳದ ಕಾರಣ ಗೌರಿಬಿದನೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದ್ದರಿಂದ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕರೆ ತರಲಾಗಿತ್ತು. ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ.

ನಾಯಿ ಕಚ್ಚಿದ ಕಾರಣ ಮೆದುಳಿಗೆ ವಿಷ ಹರಡಿದೆ ಎಂದು ರಕ್ತ ಪರೀಕ್ಷೆಯಿಂದ ತಿಳಿದುಬಂದಿದೆ. ಮಗುವಿನ ಮರಣ ಪ್ರಮಾಣ ಪತ್ರಕ್ಕಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಬಂದಾಗ ಮಗುವಿಗೆ ರೇಬಿಸ್ ಲಸಿಕೆ ಹಾಕುವ ಬಗ್ಗೆ ವೈದ್ಯರು ತಿಳಿಸಿಲ್ಲ ಎಂದು ತಿಳಿದು ಬಂದಿದೆ.

ಘಟನೆಯಿಂದ ಆಕ್ರೋಶಗೊಂಡ ಬಾಲಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ