ದೆಹಲಿ ಸೀಟು ಹಂಚಿಕೆ ವಿಚಾರ: ಕಾಂಗ್ರೆಸ್ ಗೆ ಮತ್ತೊಂದು ಆಘಾತ ನೀಡಿದ ಎಎಪಿ; ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು ಗೊತ್ತಾ..?
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಬಣದಿಂದ ಮಿತ್ರಪಕ್ಷಗಳು ದೂರ ಆಗಲು ಪ್ರಾರಂಭಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ಬಿಕ್ಕಟ್ಟನ್ನು ಎದುರಿಸುತ್ತಿದೆ. ಚುನಾವಣೆಗೆ ಕೇವಲ ಎರಡು ತಿಂಗಳುಗಳು ಬಾಕಿ ಇರುವಾಗ ಎನ್ ಡಿಎ ಮೈತ್ರಿಕೂಟದ ಒಳಗಿನ ಸೀಟು ಹಂಚಿಕೆಯ ಭಿನ್ನಾಭಿಪ್ರಾಯಗಳು ಪಕ್ಷಗಳನ್ನು ಹಳೆಯ ಪಕ್ಷದಿಂದ ದೂರವಿರಿಸುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲಾ ಏಳು ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ಸುಳಿವು ನೀಡಿದ್ದಾರೆ.
ಪಂಜಾಬ್ ಮತ್ತು ಚಂಡೀಗಢದ ಎಲ್ಲಾ 14 ಲೋಕಸಭಾ ಸ್ಥಾನಗಳಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಈಗಾಗಲೇ ಶನಿವಾರ ಘೋಷಿಸಿದ್ದರು. ಇದರ ಬೆನ್ನಲ್ಲೇ ಈ ಆಶ್ಚರ್ಯಕರ ಹೇಳಿಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ ಕೇಜ್ರಿವಾಲ್, ಮುಂದಿನ 10-15 ದಿನಗಳಲ್ಲಿ ಪಕ್ಷವು ಎಲ್ಲಾ 14 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಹೇಳಿದ್ದಾರೆ.
ಭಾನುವಾರ ಪಂಜಾಬ್ ನ ತಾರ್ನ್ ತರಣ್‌ನಲ್ಲಿ ಮಾತನಾಡಿದ ಕೇಜ್ರಿವಾಲ್, ದೆಹಲಿಯ ಜನರು ಎಲ್ಲಾ ಏಳು ಸ್ಥಾನಗಳನ್ನು ಎಎಪಿಗೆ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು. ಪಡಿತರ ಮಾಫಿಯಾ ವಿರುದ್ಧ ಪಂಜಾಬ್ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮಗಳು ಮತ್ತು ಉಚಿತ ವಿದ್ಯುತ್ ಯೋಜನೆ ಇದಕ್ಕೆ ಕಾರಣ ಅಂದರು.