ಕೊರಗ ಸಮುದಾಯ ಭೂಮಿಯ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿ ಬಂದಿರೋದು ವ್ಯವಸ್ಥೆಯ ಸೋಲು: ಡಾ.ಗಣನಾಥ ಶೆಟ್ಟಿ ಎಕ್ಕಾರು
ಮಂಗಳೂರು: ಈ ನೆಲದ ಮೂಲನಿವಾಸಿಗಳಾಗಿ ಒಂದೊಮ್ಮೆ ಸಮಸ್ತ ಭೂಮಿಯ ಒಡೆಯರಾಗಿದ್ದ ಕೊರಗ ಕುಟುಂಬ ನೆಲೆ ಇಲ್ಲದೆ ಪರಿತಪಿಸಬೇಕಾಗಿದೆ. ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿ ಬಂದುದು ನಮ್ಮ ವ್ಯವಸ್ಥೆಯ ಸೋಲು ಎಂದು ಖ್ಯಾತ ಜಾನಪದ ವಿದ್ವಾಂಸಕರೂ, ಪಗತಿಪರ ಚಿಂತಕರೂ ಆದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರು ಅಭಿಪ್ರಾಯ ಪಟ್ಟರು.
ಇಂದು ಬೆಳಿಗ್ಗೆ ಮಂಗಳೂರಿನ ವಾಮಂಜೂರು ಜಂಕ್ಷನ್ ನಲ್ಲಿ ಆದಿವಾಸಿ ಕೊರಗ ಕುಟುಂಬಗಳಿಗೆ 2018ರಲ್ಲಿ ಮಂಜೂರಾತಿ ಆದ 33 ಮನೆ ನಿವೇಶನಗಳನ್ನು ಹಸ್ತಾಂತರಿಸಲು ಅಗ್ರಹಿಸಿ ನಡೆದ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಬೇಷರತ್ತಾಗಿ ಯಾವುದೇ ವಿಳಂಬವಿಲ್ಲದೆ 33 ನಿವೇಶನ ಹಸ್ತಾಂತರ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರೈತ ಕಾರ್ಮಿಕ ಮುಂದಾಳು ಕೆ.ಯಾದವ ಶೆಟ್ಟಿ ಮಾತನಾಡಿ, ಆದಿವಾಸಿ ಕೊರಗ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಜಿಲ್ಲಾಢಳಿತ ಮತ್ತು ಸರಕಾರ ಯಾವುದೇ ಕಾರಣಕ್ಕೂ ನಗಣ್ಯ ಮಾಡದೇ ಒಂದು ತಿಂಗಳ ಒಳಗೆ 33 ಮನೆಗಳನ್ನು ಹಸ್ತಾಂತರಿಸದಿದ್ದಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಯಾದ ಕಾರ್ಮಿಕ ಮುಂದಾಳು ಸದಾಶಿವದಾಸ್ರವರು ಮಾತನಾಡಿ ಕೊರಗ ಸಮುದಾಯಕ್ಕೆ ಅನ್ಯಾಯವೆಸಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷರು, ಕೊರಗ ಸಮುದಾಯದ ಮುಂದಾಳು ಕೂಡ ಆಗಿರುವ ಶ್ರೀಧರ್ ನಾಡ ಮಾತನಾಡಿ, ಕೊರಗ ಸಮುದಾಯದ ಜನಸಂಖ್ಯೆ ತೀವ್ರವಾಗಿ ಕುಸಿತ ಆಗುತ್ತಿದೆ. ಉದ್ಯೋಗ, ವಸತಿ ಮತ್ತು ಆರೋಗ್ಯದ ಪ್ರಶ್ನೆ ಗಂಭೀರ ಪ್ರಶ್ನೆಯಾಗಿ ಕಾಡುತ್ತಿದೆ. ಇಂತಹ ಸಮಯದಲ್ಲಿ ಕೊರಗ ಸಮುದಾಯದ ಸಹಾಯಕ್ಕೆ ಬೆಂಗಾವಲಾಗಿ ನಿಲ್ಲಬೇಕಾದ ಸರಕಾರ ಅನ್ಯಾಯವೆಸಗುತ್ತಿದೆ. ಭೂಮಿಯ ಪ್ರಶ್ನೆ ಗಂಭೀರ ಪ್ರಶ್ನೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯು ಮಹಮ್ಮದ್ ಫೀರ್ ವರದಿಯ ಪ್ರಕಾರ ಎರಡುವರೆ ಎಕರೆ ಕೃಷಿ ಭೂಮಿ ವಿತರಣೆಗಾಗಿ ಆಂದೋಲನ ರೂಪಿಸಲಿದೆ ಎಂದು ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ರಾಜ್ಯ ಸಮಿತಿಯ ಸಹಸಂಚಾಲಕರೂ. ಪ್ರಗತಿಪರ ಚಿಂತಕರೂ ಆದ ಡಾ. ಕೃಷ್ಣಪ್ಪ ಕೊಂಚಾಡಿಯವರು ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ರೈತ ಸಂಘದ ಮುಂದಾಳು ಸದಾಶಿವದಾಸ್, ಸ್ಥಳೀಯ ಕಾರ್ಪೋರೇಟರ್ ಭಾಸ್ಕರ್ ಕೆ. ಅವರು ಮಾತನಾಡಿದರು.
ಘಟಕದ ಅಧ್ಯಕ್ಷರಾದ ಕರಿಯ ಕೆ. ಯವರು ನಿವೇಶನ ಹಸ್ತಾಂತರ ಆಗುವವರೆಗೂ ಹೋರಾಟದಿಂದ ವಿರಮಿಸುವುದೇ ಇಲ್ಲ ಎಂದು ಘೋಷಿಸಿದರು. ಪ್ರಾಸ್ತವಿಕವಾಗಿ ಆದಿವಾಸಿ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗ್ರು ಮಾತನಾಡಿದರು.
ಜಾಥಾದಲ್ಲಿ ಸ್ಥಳೀಯ ಘಟಕದ ಕಾನೂನು ಸಲಹೆಗಾರರಾದ ಮನೋಜ್ ವಾಮಂಜೂರು, ಹಿರಿಯ ಸಾಹಿತಿ ಬಿ ಎಂ ರೋಹಿಣಿ, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಕೃಷ್ಣ, ರಘುವೀರ್, ಡಿವೈಎಫ್ ಐನ ನಾಯಕರಾದ ದಿನೇಶ್ ಬೊಂಡಂತಿಲ, ಜಯಶೀಲ, ಪ್ರಶಾಂತ್ ಎಂ ಬಿ, ಮನೋಜ್ ಉರ್ವಸ್ಟೋರ್ ಮೊದಲಾದವರು ಜಾಥದಲ್ಲಿ ಇದ್ದರು.
ಜಾಥಾ ನಾಯಕತ್ವವನ್ನು ಸಂಘಟನೆಯ ಪದಾಧಿಕಾರಿಗಳಾದ ಶೇಖರ್, ಪ್ರನೀತ್, ವಿನೋದ್ ಏಕ್ಯಾತ್, ಮಂಜುಳಾ, ಯಶೋಧ, ವಿಕಾಸ್, ವಿಘ್ನೇಶ್, ಗಣೇಶ್, ಕೃಷ್ಣಪ್ಪ ಮೊದಲಾದವರು ನೇತೃತ್ವ ವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka