ನನ್ನ ವೃತ್ತಿಜೀವನವೇ ಮುಗಿಯಿತು ಎಂದೇ ಭಾವಿಸಿದ್ದೆ: ಚೀನಾ ಕೈಗೆ ಸಿಕ್ಕಿಬಿದ್ದಿದ್ದ ಏಜೆಂಟರ ಘಟನೆ ನೆನಪಿಸಿಕೊಂಡ ಅಜಿತ್ ದೋವಲ್ - Mahanayaka

ನನ್ನ ವೃತ್ತಿಜೀವನವೇ ಮುಗಿಯಿತು ಎಂದೇ ಭಾವಿಸಿದ್ದೆ: ಚೀನಾ ಕೈಗೆ ಸಿಕ್ಕಿಬಿದ್ದಿದ್ದ ಏಜೆಂಟರ ಘಟನೆ ನೆನಪಿಸಿಕೊಂಡ ಅಜಿತ್ ದೋವಲ್

ajit doval
21/09/2026

ನವದೆಹಲಿ / ರೂರ್ಕಿ:  ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಾಗಿದ್ದ ಅತ್ಯಂತ ಆತಂಕಕಾರಿ ಘಟನೆಯೊಂದನ್ನು ಮೆಲಕು ಹಾಕಿದ್ದಾರೆ. ಗಡಿಯಾಚೆಗೆ ಕಾರ್ಯಾಚರಣೆಗೆ ತೆರಳಿದ್ದ ಭಾರತೀಯ ಏಜೆಂಟರ ತಂಡವೊಂದು ಚೀನಾ ಸೇನೆಯ ಕೈಗೆ ಸಿಕ್ಕಿಬಿದ್ದ ಘಟನೆ ಮತ್ತು ಆ ಸಂದರ್ಭದಲ್ಲಿ ತಾವು ಅನುಭವಿಸಿದ ಆತಂಕವನ್ನು ಅವರು ಬಹಿರಂಗಪಡಿಸಿದ್ದಾರೆ.

ಐಐಟಿ ರೂರ್ಕಿಯ (IIT Roorkee) ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಜಿತ್ ದೋವಲ್, ತಾವು 20ರ ಹರೆಯದಲ್ಲಿದ್ದಾಗ ನಡೆದ ಈ ಪ್ರಸಂಗವನ್ನು ವಿವರಿಸಿದರು:

ಗಡಿಯಾಚೆಗೆ ಕಾರ್ಯಾಚರಣೆಗೆ ತೆರಳಿದ್ದ ತಂಡವು 5 ರಿಂದ 6 ದಿನಗಳಲ್ಲಿ ಹಿಂತಿರುಗಬೇಕಿತ್ತು. ಆದರೆ 10-11 ದಿನಗಳಾದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಪ್ರದೇಶದಲ್ಲಿ ಹಿಮಪಾತ ಅಥವಾ ಇತರ ಅನಾಹುತಗಳ ವರದಿಯೂ ಇರಲಿಲ್ಲ.  ಕೇಂದ್ರ ಕಚೇರಿಯಿಂದ ಬಂದ ಕರೆಯಲ್ಲಿ ಮೇಲಾಧಿಕಾರಿಗಳು, “ನಿಮ್ಮ ತಂಡದವರು ಚೀನಾ ಸೇನೆಯ ವಶದಲ್ಲಿದ್ದಾರೆ ಮತ್ತು ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ” ಎಂಬ ಆಘಾತಕಾರಿ ಸುದ್ದಿ ನೀಡಿದರು. ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ಚೀನಾ ಅವರನ್ನು ಹಿಂತಿರುಗಿಸಿತಾದರೂ, ವಾಪಸಾದ ಏಜೆಂಟರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಝರಿತರಾಗಿದ್ದರು. ಈ ಘಟನೆಯ ನಂತರ ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಲಾಯಿತು. “ಆ ಕ್ಷಣದಲ್ಲಿ ನನ್ನ ವೃತ್ತಿಜೀವನ ಇಲ್ಲಿಗೆ ಮುಗಿಯಿತು, ಇನ್ನು 20ರ ಹರೆಯದಲ್ಲೇ ಹೊಸ ವೃತ್ತಿಜೀವನವನ್ನು ಹುಡುಕಿಕೊಳ್ಳಬೇಕು ಎಂದೇ ಭಾವಿಸಿದ್ದೆ. ಆ ಘಟನೆ ಅತ್ಯಂತ ಅನನುಭವಿ ರೀತಿಯಲ್ಲಿ ಸಂಭವಿಸಿತ್ತು ಎಂದರು.

ಆದರೆ ತನಿಖೆಯ ವರದಿಯಲ್ಲಿ ಅಜಿತ್ ದೋವಲ್ ಅವರ ಯಾವುದೇ ತಪ್ಪಿಲ್ಲ ಎಂಬುದು ಸಾಬೀತಾಯಿತು. ಪ್ರಧಾನ ಕಚೇರಿಯಿಂದ ಅವರಿಗೆ ನೀಡಲಾಗಿದ್ದ ಗಡಿ ನಕ್ಷೆಗಳು ಮತ್ತು ಸ್ಕೆಚ್‌ಗಳಲ್ಲಿಯೇ ದೋಷಗಳಿದ್ದಿದ್ದರಿಂದ ಕಾರ್ಯಾಚರಣೆಯ ಹಾದಿ ತಪ್ಪಿತ್ತು ಎಂಬುದು ಬೆಳಕಿಗೆ ಬಂತು ಎಂದರು.

“ಕಳೆದ 1,000 ವರ್ಷಗಳ ಇತಿಹಾಸದಲ್ಲೇ ಇಂದಿನ ಯುವಜನತೆ ಅತ್ಯಂತ ಅದೃಷ್ಟವಂತ ಪೀಳಿಗೆ. ನಿಮಗಿಂತ ಹಿಂದಿನ ಪೀಳಿಗೆಗಳು ದಾಸ್ಯ ಮತ್ತು ಸಂಕಷ್ಟಗಳ ವಿರುದ್ಧ ಹೋರಾಡಿದವು. ಆದರೆ ಇಂದು ನಿಮಗಾಗಿ ಅಪಾರ ಅವಕಾಶಗಳು ತೆರೆದುಕೊಂಡಿವೆ. ಮುಂದಿನ ದಿನಗಳಲ್ಲಿ ದೇಶ ಹಾಗೂ ಸಮಾಜದ ಪ್ರಗತಿಗೆ ತಂತ್ರಜ್ಞಾನವೇ ಪ್ರಮುಖ ಶಕ್ತಿಯಾಗಲಿದೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler