ಅಂಬೇಡ್ಕರ್ ಭವನದಲ್ಲೇ ಜೈಭೀಮ್ ಧ್ವಜಕ್ಕಿಲ್ಲ ಸ್ಥಾನ: ಅಂಬೇಡ್ಕರ್ ಭಾವ ಚಿತ್ರದ ಧ್ವಜ ತೆರವುಗೊಳಿಸಿದ ಪಂಚಾಯತ್ - Mahanayaka

ಅಂಬೇಡ್ಕರ್ ಭವನದಲ್ಲೇ ಜೈಭೀಮ್ ಧ್ವಜಕ್ಕಿಲ್ಲ ಸ್ಥಾನ: ಅಂಬೇಡ್ಕರ್ ಭಾವ ಚಿತ್ರದ ಧ್ವಜ ತೆರವುಗೊಳಿಸಿದ ಪಂಚಾಯತ್

sullia
29/09/2022

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಅವರ ಬಾವುಟವನ್ನು ಅಜ್ಜಾವರ ಪಂಚಾಯತ್ ತೆರವುಗೊಳಿಸಿದ ಘಟನೆ ನಡೆದಿದೆ.

ಘಟನೆಯನ್ನು ಖಂಡಿಸಿ ಅಂಬೇಡ್ಕರ್ ಆದರ್ಶ ಸೇವ ಸಮಿತಿಯ ಜಿಲ್ಲಾ ಮತ್ತು ಸುಳ್ಯ ತಾಲೂಕು, ಅಜ್ಜಾವರ ಘಟಕ ಸಮಿತಿಯ ಪದಾಧಿಕಾರಿಗಳು ಪಂಚಾಯತ್ ಗೆ ತೆರಳಿ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.

ಘಟನೆ ಕುರಿತು ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ, ಮೇನಾಲದ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ  ಅಂಬೇಡ್ಕರ್ ಅವರ ಭಾವ ಚಿತ್ರ ಹೊಂದಿದ್ದ ಬಾವುಟ ಯಾರಿಗೂ ತೊಂದರೆ ಉಂಟು ಮಾಡುವ ಜಾಗದಲ್ಲಿ ಇರಲಿಲ್ಲ. ಜೊತೆಗೆ ಗ್ರಾಮಸ್ಥರ ಮೆಚ್ಚುಗೆಯನ್ನೂ ಪಡೆದಿತ್ತು. ಆ ಭಾವುಟವನ್ನು ಏಕಾಏಕಿಯಾಗಿ ಪಂಚಾಯತ್ ಅಧಿಕಾರಿಯವರು ತೆರವುಗೊಳಿಸುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಈ ಘಟನೆಯು ನಮ್ಮೆಲ್ಲರಿಗೂ ನೋವುಂಟು ಮಾಡಿದ್ದು ಬಾವುಟವನ್ನು ಕೂಡಲೇ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಪಂಚಾಯತ್ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಐವರ್ನಾಡು ಮಾತನಾಡಿ,  ಬಾಬಾ ಸಾಹೇಬರ ಜೈ ಭೀಮ್ ಧ್ವಜ ತೆರವುಗೊಳಿಸಿದ  ಪಿಡಿಒ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅಗೌರವ ಉಂಟು ಮಾಡಿದ್ದಾರೆ. ಕೂಡಲೇ ಧ್ವಜವನ್ನು ಈ ಹಿಂದೆ ಇದ್ದ ಸ್ಥಳದಲ್ಲೇ ಹಾಕಬೇಕೆಂದು ಒತ್ತಾಯಿಸಿದರು.

ಇನ್ನೂ ಅಜ್ಜಾವರ ಪಂಚಾಯತ್ ಅಧ್ಯಕ್ಷೆ ಸತ್ಯಾವತಿ ಅವರು, ಪ್ರತಿಭಟನಾಕಾರರ ಮನವಿಯನ್ನು ಆಲಿಸಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಡಾ.ಬಿ,ಆರ್,ಅಂಬೇಡ್ಕರ್ ಅವರ ಎಲ್ಲಾ ಸ್ಥಳಗಳಲ್ಲಿಯೂ ಜೈಭೀಮ್ ಧ್ವಜವನ್ನು ಬಳಸಲಾಗುತ್ತಿದೆ. ಯಾವುದೇ ಕಾರ್ಯಕ್ರಮವಿರಲಿ, ಕಟ್ಟಡಗಳಿರಲಿ, ಸಂಸ್ಥೆಗಳಿರಲಿ ಎಲ್ಲಾ ಸ್ಥಳಗಳಲ್ಲೂ ಜೈಭೀಮ್ ಧ್ವಜ ಬಳಸಲಾಗುತ್ತಿದೆ. ಆದರೆ, ಅಂಬೇಡ್ಕರ್ ಭವನಗಳಲ್ಲಿಯೇ ಜೈಭೀಮ್ ಧ್ವಜಕ್ಕೆ ಸ್ಥಳ ಇಲ್ಲವೇ ಎನ್ನುವ ಚರ್ಚೆಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿದ್ದು, ರಾಜ್ಯಾದ್ಯಂತ ಅಂಬೇಡ್ಕರ್ ಭವನಗಳಲ್ಲಿ ಜೈಭೀಮ್ ಧ್ವಜ ಬಳಸುವುದನ್ನು ಕಡ್ಡಾಯಗೊಳಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿದೆ.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘಟನೆಯ ಕಾರ್ಯದರ್ಶಿಗಳಾದ ಸುನೀಲ್ ಗಂಧದಗುಡ್ಡೆ, ಸಂಘಟನಾ ಕಾರ್ಯದರ್ಶಿ- ಅಜ್ಜಾವರ  ಪಂಚಾಯತ್ ಸದಸ್ಯರಾದ ರಾಘವ ಮುಳ್ಯಕಜೆ, ಸಂಘಟನೆಯ ಅಜ್ಜಾವರ ಘಟಕ ಅಧ್ಯಕ್ಷರಾದ ಹರೀಶ್ ಮೇನಾಲರವರು, ಉಪಾಧ್ಯಕ್ಷರಾದ ಚಿದಾನಂದ ಗಂಧದಗುಡ್ಡೆ, ಅಜ್ಜಾವರ ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಮಾವಿನಪಳ್ಳ  ಹಾಗೂ ಸಂಘಟನೆ ಪದಾಧಿಕಾರಿಗಳಾದ ದಯಾನಂದ ಗಂಧದಗುಡ್ಡೆ, ಶಶಿಧರ ಗಂಧದಗುಡ್ಡೆ, ಕಿರಣ್ ಅಡೂರು, ಮದುಸೂದನ ಕಾಟಿಪಳ್ಳ, ನಾಗರಾಜ ಕಾಂತಮಂಗಲ, ನಾಗೇಶ್ ಕಾಂತಮಂಗಲ, ದೀಕ್ಷಿತ್ ಗಂಧದಗುಡ್ಡೆ, ದಿವಾಕರ ಹನಿಯಡ್ಕರವರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ