ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: ಗೃಹ ಸಚಿವರ ತವರಿನಲ್ಲಿ ಮತ್ತೊಂದು ದಲಿತ ದೌರ್ಜನ್ಯ - Mahanayaka
6:02 PM Wednesday 22 - January 2025

ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: ಗೃಹ ಸಚಿವರ ತವರಿನಲ್ಲಿ ಮತ್ತೊಂದು ದಲಿತ ದೌರ್ಜನ್ಯ

tumakuru
05/01/2025

ತುಮಕೂರು: ಇತ್ತೀಚೆಗೆ ಅಂಬೇಡ್ಕರ್ ಅವರಿಗೆ ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ಅವಮಾನಿಸಿದ ವಿಚಾರಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಶಾಸಕರು, ಸಚಿವರು, ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿ ಸುದ್ದಿಯಾಗಿದ್ದರು. ಇದೀಗ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೇ, ಅದೂ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಅಂಬೇಡ್ಕರ್ ಹಾಡು ಹಾಕಿದ್ದಕ್ಕೆ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.   ತಾಲ್ಲೂಕಿನ ಕಸಬಾ ಹೋಬಳಿ ಮುದ್ದನಹಳ್ಳಿ ಗ್ರಾಮದ ಗೊಲ್ಲ ಸಮುದಾಯದ ರೈಲ್ವೆ ಇಲಾಖೆ ಪೊಲೀಸ್ ಅಧಿಕಾರಿ ಚಂದ್ರಶೇಖ‌ರ್ ಮತ್ತು ಮತ್ತೊಬ್ಬ ವ್ಯಕ್ತಿ ನರಸಿಂಹರಾಜು ಎಂಬವರು ಅಂಬೇಡ್ಕರ್ ಅವರ ಹಾಡು ಹಾಕಿದಕ್ಕೆ ದಲಿತ ಯುವಕನ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ದೀಪು(19)  ಹಾಗೂ  ನರಸಿಂಹ ಮೂರ್ತಿ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮರ್ಮಾಂಗಕ್ಕೆ ಹಲ್ಲೆ ನಡೆಸಿದ ಪರಿಣಾಮ ಮರ್ಮಾಂಗಕ್ಕೆ 9 ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ:

ಶನಿವಾರ ಸಂಜೆ ಎಂದಿನಂತೆ ಹಾಲಿನ ವಾಹನ ಚಾಲನೆ ಮಾಡಿಕೊಂಡು ಇಬ್ಬರು ದಲಿತ ಸಮುದಾಯದ ಯುವಕರು ಸರಿಸುಮಾರು 6 ಗಂಟೆ ಸಮಯದಲ್ಲಿ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ, ಅವರಿಗೆ ಇಷ್ಟವಾದ ಬಾಬಾ ಸಾಹೇಬ್  ಅಂಬೇಡ್ಕ‌ರ್ ಅವರ ಬಗೆಗಿನ ಜೈ ಭೀಮ್ ಹಾಡು ಹಾಕಿಕೊಂಡು ಬರುತ್ತಿದ್ದ ವೇಳೆ, ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ನೀವು ಯಾವ ಜಾತಿಯವರು ಎಂದು ಜಾತಿ ಹೆಸರಿಸಿ ಅವಾಚ್ಯ ಶಬ್ದಗಳಿಂದ ಬೈದು, ಜೊತೆಗೆ ಈ ಹಾಡು ಎಲ್ಲಿಯೂ ಹಾಕದಂತೆ ತಾಕೀತು ಮಾಡಿ, ವಾಹನದಲ್ಲಿದ್ದ ಇಬ್ಬರನ್ನು ಎಳೆದಾಡಿ ಹಲ್ಲೆ ಮಾಡಿ, ದೀಪು ಎಂಬ ಯುವಕನ ಮರ್ಮಾಂಗಕ್ಕೆ ಗಂಭೀರ ಸ್ವರೂಪದ ಹಲ್ಲೆ ಮಾಡಿದ್ದಾರೆ ಎಂದು ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ನೊಂದ ಯುವಕರು ದೂರು ದಾಖಲಿಸಿದ್ದಾರೆ.

ಕೊರಟಗೆರೆ ಪಟ್ಟಣದ ಸರಕಾರಿ ಬಸ್‍ ನಿಲ್ದಾಣದ ಆವರಣದಲ್ಲಿನ ಹಳೆಯ ಶೌಚಗುಂಡಿಯ ಸಮೀಪ ಇತ್ತೀಚೆಗೆ ಶೌಚಗುಂಡಿ ತುಂಬಿಹರಿದು ಶೇಖರಣೆಯಾಗಿದ್ದ ಕೊಳಚೆಯುಕ್ತ ಮಲದ ನೀರನ್ನು 14 ವರ್ಷದ ದಲಿತ ಬಾಲಕ ಮತ್ತು ದಲಿತ ವ್ಯಕ್ತಿಯಿಂದ ಸ್ವಚ್ಚಗೊಳಿಸಿದ ಘಟನೆಯೂ ನಡೆದಿತ್ತು. ಈ ಪ್ರಕರಣ ಹಳ್ಳ ಹಿಡಿದ ಬೆನ್ನಲ್ಲೇ ಇದೀಗ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ನಡೆದಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ದಲಿತರಿಗೆ ರಕ್ಷಣೆ ಇಲ್ವಾ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ