ಅಶಾಂತಿ ಸೃಷ್ಟಿಸಲು ಗೋಹತ್ಯೆ ನಿಷೇಧ ಮಸೂದೆ ಮಂಡನೆ: ಜೆಡಿಎಸ್ ಬೆಂಬಲಿಸುವುದಿಲ್ಲ-ದೇವೇಗೌಡ
15/12/2020
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ಈ ಮಸೂದೆ ಮಂಡನೆ ಮಾಡಿದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
2010ರಲ್ಲಿ ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿತ್ತು. ಅಂದು ಕೂಡ ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಈಗಲೂ ಕೂಡ ಮಸೂದೆ ಮಂಡನೆಗೆ ಜೆಡಿಎಸ್ ಬೆಂಬಲ ನೀಡಲ್ಲ ಎಂದು ಹೇಳಿರುವ ದೇವೇಗೌಡರು, ಈ ಮಸೂದೆಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆಯೂ ಮಸೂದೆ ಮಂಡನೆಗೆ ಹೊರಟಾಗ ನಾವು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದು ಮಸೂದೆಗೆ ಒಪ್ಪಿಗೆ ನೀಡದಂತೆ ಮನವಿ ಮಾಡಿದ್ದೆವು. ಬಳಿಕ ಮಸೂದೆ ಹಿಂಪಡೆಯಲಾಗಿತ್ತು. ಆದರೆ ಈಗ ಸರ್ಕಾರ ಮತ್ತೆ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾಗಿರುವುದು ಸರಿಯಲ್ಲ, ಇದಕ್ಕೆ ಜೆಡಿಎಸ್ ವಿರೋಧವಿದೆ ಎಂದು ದೇವೇಗೌಡರು ಹೇಳಿದ್ದಾರೆ.