ಮೀಸಲಾತಿ ಕಡಿತ: ಹಿಂದಿನ ನಿಯಮ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ | ದ್ರಾವಿಡ ಭೀಮ್ ಆರ್ಮಿ ಎಚ್ಚರಿಕೆ
ಹಾಸನ: ಮೀಸಲಾತಿ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಜಾರಿಗೊಳಿಸದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ದ್ರಾವಿಡ ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ಸಂಪತ್ ಸುಬ್ಬಯ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ದೇಶದ 60 ಲಕ್ಷ ಪ.ಜಾತಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು ಸರಿಯಲ್ಲ. ಇದು ಬಿಜೆಪಿ ಸರ್ಕಾರದ ಹೊಣೆಗೇಡಿತನ ಮತ್ತು ದಲಿತರ ಮೇಲಿನ ಕಾಳಜಿ ಸರ್ಕಾರಕ್ಕೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.
ಶೇ.24.1 ರಷ್ಟು ಅನುದಾನ ನೀಡಬೇಕಿದ್ದ ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ಮೂಲ ಹಂಚಿಕಯಿಂದ 1 ಸಾವಿರ ಕೋಟಿಯನ್ನು ಕಡಿತಗೊಳಿಸಿದೆ. ಈ ರೀತಿ ಮೂಲ ಹಂಚಿಕೆಯಿಂದ ಕಡಿತಗೊಳಿಸಲು ಸರ್ಕಾರ ಯಾವುದೇ ಕಾರಣಗಳನ್ನು ನೀಡಿಲ್ಲ. ಹಾಗೂ ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ 25,000 ರೂ.ಗಳನ್ನು ಕೇವಲ 8 ಸಾವಿರ ರೂ.ಗಳಿಗೆ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರವು ಈ ಮೂರು ಆದೇಶಗಳನ್ನು ವಾಪಸ್ ಪಡೆದು, ಮೊದಲಿನಂತೆಯೇ ಅನುಷ್ಠಾನಗೊಳಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ದಲಿತ ಮತ್ತು ಮುಸ್ಲಿಮ್ ಸಂಘಟನೆಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಆರ್.ಪ್ರಸಾದ್, ಅರಸೀಕೆರೆ ತಾಲೂಕು ಅಧ್ಯಕ್ಷ ಮಹಮ್ಮದ್ ಫೈಯಾಜ್ ಟಿಪ್ಪು, ಸುಜಯ್ ಹಾಸನ್, ಫರಿದ್ಧ್ ಹಾಸನ್ ಉಪಸ್ಥಿತರಿದ್ದರು.