“ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರರ ಕೈಬೆರಳು ತೋರುತ್ತಿರುವುದು ಏನನ್ನು?” - Mahanayaka

“ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರರ ಕೈಬೆರಳು ತೋರುತ್ತಿರುವುದು ಏನನ್ನು?”

04/11/2020

  • ಪರಶುರಾಮ್ ಎ.

ಯಾವ ಒಬ್ಬ ಮಹಾತ್ಮ ರಾಜಕಾರಣಿ ಸಮಾಜ ಸುಧಾರಕರಿಗೂ ಇಲ್ಲದಷ್ಟು ಪ್ರತಿಮೆಗಳು ಡಾ.ಬಿ ಆರ್ ಅಂಬೇಡ್ಕರಿಗೆ ಈ ದೇಶದ ಉದ್ದಗಲಕೂ ಕೊಳಚೆ ಪ್ರದೇಶ ಹಳ್ಳಿ ಪಟ್ಟಣಗಳೆಂಬ ತಾರತಮ್ಯವಿಲ್ಲದೆ ಇರುವುದು ಸತ್ಯ ಸಂಗತಿ. ಬಹುತೇಕ ಎಲ್ಲಾ ಪ್ರತಿಮೆಗಳು ಡಾ.ಬಿ ಆರ್ ಅಂಬೇಡ್ಕರರು ತೋರುಬೆರಳು ತೋರಿಸುತ್ತಿರುವ ಭಂಗಿ ಇರುವ ಪ್ರತಿಮೆಗಳನ್ನು ನೋಡುತ್ತಿದ್ದೇವೆ. ದಾರಿಯಲ್ಲಿ ಸಾಗುವಾಗಲೋ ಸ್ಲಂಗಳಲ್ಲಿ ಅಥವಾ ವಿಧಾನಸೌಧದ ಮುಂದೆಯೂ, ಭಾರತದಲ್ಲಿ ಇಂತಹ ಹಲವು ಪ್ರತಿಮೆಗಳನ್ನು ಕಂಡಿರುತ್ತೇವೆ ಅಷ್ಟಕ್ಕೂ ಆ ತೋರು ಬೆರಳು ತೋರುತ್ತಾ ಇರುವುದು ಏನು ಎಂದು ಎಂದಾದರೂ ಯೋಚಿಸಿದ್ದೇವೆಯೇ? ಗೊತ್ತಿದ್ದವರಿಂದ ಕೇಳಿ ತಿಳಿದಿದ್ದೇವೆಯೇ? ಎಂಬ ಹಲವು ಪ್ರಶ್ನೆ ಮೂಡುತ್ತದೆ ಇಂತಹ ಪ್ರಶ್ನೆಗೆ ವಿವಿಧ ಕ್ಷೇತ್ರದ ಹಿನ್ನೆಲೆಯಿಂದ ಬಂದ ವ್ಯಕ್ತಿಗಳನ್ನು ಈ ಕುರಿತು ವಿಚಾರದ ಬಗ್ಗೆ ಗಮನ ಹರಿಸಿದಾಗ ತಿಳಿಯುವ ಸಂಗತಿಗಳೇ ಬೇರೆ ಅದು ಕುತೂಹಲವು ಬೆಚ್ಚಿ ಬೀಳಿಸುವ ಸಂಗತಿಗಳು ಸಹ ಈ ಪ್ರಶ್ನೆಯ ಉತ್ತರದಲ್ಲಿ ಅಡಗಿದೆ.


ಕ್ರಾಂತಿಕಾರಿ ಕವಿ ಲಕ್ಷ್ಮಣ್ ಜೀ ತಮ್ಮ ‘ಗೂಡೆ’ ಎಂಬ ಪುಸ್ತಕದಲ್ಲಿ ಡಾ.ಬಿ ಆರ್ ಅಂಬೇಡ್ಕರರು ಇಂದು ಬದುಕಿದ್ದಿದ್ದರೆ?ಎಂಬ ಲೇಖನವೊಂದರಲ್ಲಿ ಒಂದು ಸಾರಿ ಅಂಬೇಡ್ಕರರನ್ನು ಕೆಲವರು ‘ನೋಡಿ ನೀವು ಸಂವಿಧಾನದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಬೇಕು ಮೀಸಲಾತಿ ಹತ್ತು ವರ್ಷಗಳಿಗೆ ಸೀಮಿತಗೊಳಿಸಬೇಕು’ ಎಂದು ಕೇಳಿದಾಗ ಅಷ್ಟು ದೂರದಲ್ಲಿದ್ದ ಒಂದು ವಿದ್ಯುಚ್ಚಕ್ತಿ ಕಂಬವನ್ನು ಡಾ.ಬಿ ಆರ್ ಅಂಬೇಡ್ಕರರು ಅವರ ತೋರು ಬೆರಳಿನಿಂದ ತೋರಿಸುತ್ತ ‘ನೋಡಿ ನೀವು ನನ್ನನ್ನು ಆ ಕಂಬಕ್ಕೆ ನೇಣು ಹಾಕಿದರೂ ಪರವಾಗಿಲ್ಲನ್ನ ನಿಲುವಿನಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ’ ಅಂದರಂತೆ ಈ ಕಾರಣಕ್ಕಾಗಿಯೇ ಬಹಳಷ್ಟು ಪ್ರತಿಮೆಗಳು ತೋರು ಬೆರಳು ತೋರಿಸುತ್ತ ನಿಂತಿರುವ ಭಂಗಿಗಳಲ್ಲಿವೆ ಎಂದು ದಾಖಲಿಸುತ್ತಾರೆ.


ಸಮಾಜದಲ್ಲಿನ ತಪ್ಪುಗಳನ್ನು ಮತ್ತು ರಾಜಕಾರಣಿಗಳ ಭ್ರಷ್ಟತೆಯನ್ನು ಎತ್ತಿ ತೋರಿಸುವ ಅದನ್ನೆ  ಮಾರ್ಮಿಕವಾಗಿ ಹಾಗು ಹಾಸ್ಯವಾಗಿಯೂ ವಿಡಂಬನಾತ್ಮಕವಾಗಿಯೂ ತಮ್ಮ ನಾಟಕಗಳಲ್ಲಿ ಅಳವಡಿಸಿಕೊಂಡು ಸಮಾಜವನ್ನು ಎಚ್ಚರವಹಿಸುತ್ತಿರುವ  ಮಾಸ್ಟರ್ ಹಿರಣ್ಣಯ್ಯನವರು ಅವರ ‘ಲಂಚಾವತಾರ ‘ ನಾಟಕದಲ್ಲಿ ಡಾ.ಬಿ ಆರ್ ಅಂಬೇಡ್ಕರರು ಬೆರಳು ತೋರುತ್ತಿರುವುದು ಏನೆಂದು ಹೀಗೆ ಹೇಳಿದ್ದಾರೆ ‘ಭಾರತದ ಉದ್ಧಾರಕೆ ಜನರ ಅಭಿವೃದ್ದಿ ಸಾಮಾಜಿಕ ನ್ಯಾಯಕ್ಕಾಗಿ ನಾನು ಶ್ರಮವಹಿಸಿ ರಚಿಸಿದ ಪವಿತ್ರವಾದ ಸಂವಿಧಾನದವನ್ನು ಇಂಚ್ ಇಂಚಾಗಿ ಕೊಲ್ತಿರೊ ದರಿದ್ರ ಕ* ಸೂ*** ರಾಜಕಾರಣಿಗಳಿರೊ ಜಾಗ ನೋಡು ಇದೆ’’ ಎಂದು ವಿಧಾನಸೌಧದತ್ತ ಕೈ ತೋರುತ್ತಿದ್ದಾರೆ ಎಂದು ಛೇಡಿಸಿದ್ದಾರೆ.( ಇದು ಹಲವು ವೇಳೆಯಲ್ಲಿ ಸತ್ಯ ಎನ್ನಬಹುದಾದ ಮಾತೇ ಹೌದು).


ಇದೆ ಪ್ರಶ್ನೆಯನ್ನು ಹಲವು ವರ್ಷಗಳಿಂದ ಬಿವಿಎಸ್ ‌ನ ಸಂಚಾಲಕರಾಗಿ ಕರ್ನಾಟಕದ ಉದ್ದಗಲಕೂ ಫುಲೆ ಅಂಬೇಡ್ಕರ್ ಚಳುವಳಿಯನ್ನು ವಿಸ್ತರಿಸಿ ಹಲವಾರು ವಿದ್ಯಾರ್ಥಿಗಳನ್ನು ಭೀಮವಾದಿಗಳನ್ನಾಗಿ ಸೃಷ್ಟಿಸಿರುವ ಡಾ.ಹರಿರಾಮರವರನ್ನು ಕೇಳಿದಾಗ ಅವರು ‘ಡಾ.ಬಿ ಆರ್ ಅಂಬೇಡ್ಕರರು ಭಾರತದಲ್ಲಿ ಇರಬಹುದಾದ ನಿಮ್ಮ ಅಷ್ಟೂ ಸಮಸ್ಯೆಗೆ ಉತ್ತರ ಸಿಗುವುದು ನಾ ರಚಿಸಿದ ಸಂವಿಧಾನದಲ್ಲಿದೆ ನೀವು ಈ ದೇಶ ರಾಜ್ಯ ಆಳುವ ನಾಯಕರಾಗಿ ನೀವು ಅಲ್ಲಿಗೆ ಅಂದರೆ ವಿಧಾನಸೌಧದ, ಪಾರ್ಲಿಮೆಂಟಿನ ಒಳಗೆ ಹೋಗಿ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿ’ ಎಂದು ಅವರು ಸಂದೇಶ ನೀಡುತ್ತ ಕೈ ಬೆರಳನ್ನು ಆ ಕಡೆ ತೋರುತ್ತ ನಿಂತಿದ್ದಾರೆ ಎಂದು ತಿಳಿಸುವರು.


ಹೀಗೆ ಅವರವರ ದೃಷ್ಡಿಕೋನಗಳಿಗೆ ತಕ್ಕಂತೆ ಡಾ.ಬಿ ಆರ್ ಅಂಬೇಡ್ಕರರು ತಮ್ಮ ಕೈ ಬೆರಳು ತೋರುತ್ತಿರುವುದೇನೆಂದು ತಿಳಿಸುತ್ತಾರೆ. ಆದರೆ ಡಾ, ಬಿ ಆರ್, ಅಂಬೇಡ್ಕರರ ತಮ್ಮ ಕೊನೆಯಾಸೆಯಂತೆ ಈ ದೇಶವನ್ನು ನನ್ನ ಮುಂದಿನ ಮಕ್ಕಳಾದ ಅಂದರೆ ನಾವುಗಳು ಅವರು ರಚಿಸಿ ಕೊಟ್ಟ ಪವಿತ್ರ ಸಂವಿಧಾನ ಜಾರಿಗೊಳಿಸಬೇಕು. ಸಂವಿಧಾನಕ್ಕೂ ಭಾರತದ ಸಮಾಜಕ್ಕು ನ್ಯಾಯಯುತವಾದ ನ್ಯಾಯ ದೊರಕಿಸಬೇಕು ಎಂಬುದು ಅವರ ಮಹದಾಸೆ  ಈಗಲಾದರೂ ಡಾ, ಬಿ ಆರ್, ಅಂಬೇಡ್ಕರರ ಆಸೆಯನ್ನರಿತು ಭಾರತದ ಜನತೆಗೆ ಅವರು ಕೊಡುಗೆಯಾಗಿ ನೀಡಿದ ಪವಿತ್ರ ಸಂವಿಧಾನ ಜಾರಿಗೊಳಿಸಲು ಚಿಂತಿಸಿ ಮುನ್ನಡೆಯೋಣ.


ಇತ್ತೀಚಿನ ಸುದ್ದಿ