ಬ್ರಹ್ಮ ದೇವನ ವಿರುದ್ಧ ಸಮರ ಸಾರಲು ಹೊರಟಿತೇ ಬಿಜೆಪಿ? | ವಿಧಿ ಲಿಖಿತಕ್ಕೇ ಸವಾಲೆ? - Mahanayaka
9:19 PM Wednesday 11 - September 2024

ಬ್ರಹ್ಮ ದೇವನ ವಿರುದ್ಧ ಸಮರ ಸಾರಲು ಹೊರಟಿತೇ ಬಿಜೆಪಿ? | ವಿಧಿ ಲಿಖಿತಕ್ಕೇ ಸವಾಲೆ?

06/11/2020

ಈ ಪ್ರಪಂಚ ದೇವರ ಸೃಷ್ಟಿ. ಮನುಷ್ಯ ಸೇರಿದಂತೆ ಸಕಲ ಜೀವ ರಾಶಿಗಳನ್ನು ಬ್ರಹ್ಮನು ಸೃಷ್ಟಿಸಿದನು. ಈ ಸಕಲ ಪ್ರಪಂಚವನ್ನು ಸೃಷ್ಟಿಸಿದ ಬ್ರಹ್ಮನು, ಯಾವ ಜೀವಿ ಹೇಗಿರಬೇಕು ಎಂದು ಬರೆದನು. ಮನುಷ್ಯನ ಹಣೆಯ ಮೇಲೆ ಹಣೆ ಬರಹ ಬರೆದನು. ಬ್ರಹ್ಮ ಹೇಗೆ ಬರೆದಿದ್ದಾನೋ ಅಂತೆಯೇ ಆತ ಬದುಕುತ್ತಾನೆ. ಇಂದಿಗೂ ಈ ಹಣೆ ಬರಹ ಎನ್ನುವ ಪದ ಸರ್ವೇ ಸಾಮಾನ್ಯವಾಗಿ ಜನರು ಬಳಸುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಇರುವುದು ಎಷ್ಟು ಸತ್ಯವೋ, ಬ್ರಹ್ಮನ ಹಣೆಬರಹ ಎನ್ನುವುದೂ ಅಷ್ಟೇ ಸತ್ಯ ಎಂದು ಜನರು ನಂಬುವಂತಾಗಿದೆ. ಬ್ರಹ್ಮನ ಬರೆದ ಹಣೆಬರಹದಿಂದಾಗಿ ಈ ಪ್ರಪಂಚ ನಡೆಯುತ್ತಿದೆ. ಮನುಷ್ಯ ಹೇಗೆ ರೋಬೋಟ್ ನ್ನು ಸೃಷ್ಟಿಸಿ, ಅದಕ್ಕೆ ಪ್ರೋಗ್ರಾಮ್ ಗಳನ್ನು ಅಪ್ ಲೋಡ್ ಮಾಡಿ ರೋಬೋಟ್ ತಯಾರಿಸಿದ್ದಾನೋ ಹಾಗೆಯೇ ಬ್ರಹ್ಮನು ಮಾನವರನ್ನು ಸೃಷ್ಟಿಸಿನು.

 

ಮೇಲೆ ನೀಡಲಾಗಿರುವ ವಿವರಣೆಗಳು ಜನರು ತಮ್ಮ ಬದುಕಿನಲ್ಲಿ ಸರ್ವೇ ಸಾಮಾನ್ಯವಾಗಿ ಕೇಳುವಂತಹ ಪದಗಳು. ರಾಷ್ಟ್ರೀಯವಾದ ಎಂಬ ಪರಿಕಲ್ಪನೆಯನ್ನು ತೆಗೆದುಕೊಂಡು ಬಂದು. ಮನುವಾದವನ್ನು ದೇಶಾದ್ಯಂತ ಹರಡುತ್ತಿರುವ ಬಿಜೆಪಿ ಪಕ್ಷವು ದೇಶಾದ್ಯಂತ ಇದೀಗ ಅಂತರ್ ಧರ್ಮೀಯ ವಿವಾಹಗಳನ್ನು ನಿಷೇಧ ಮಾಡಲು ಹೊರಟಿದೆ. ಮಧ್ಯಪ್ರದೇಶ ಸಿಎಂ, ಈ ಪೀಠಿಕೆ ಹಾಕಿದ ಬಳಿಕ ನಿನ್ನೆ ಮಂಗಳೂರಿನಲ್ಲಿ ಕರ್ನಾಟಕ ಸಿಎಂ ಯಡಿಯೂರಪ್ಪನವರು ಕೂಡ, ಮಂಗಳೂರಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಬ್ರಹ್ಮ ಶ್ರೇಷ್ಠ ಎಂಬ ಪರಿಕಲ್ಪನೆಯನ್ನು ಸಾರುತ್ತಲೇ ಬಂದಿರುವ ಪಕ್ಷ. ಬ್ರಹ್ಮ ಅಥವಾ ಮನುವಾದಿ ಸಂಘಟನೆಗಳ ಮೂಲಕ ಅಧಿಕಾರಕ್ಕೆ ಬಂಧಿರುವ ಪಕ್ಷ ಎನ್ನುವುದು ನಿಜ. ಆದರೆ, ಬಿಜೆಪಿಯು ಬ್ರಹ್ಮನ ಸೃಷ್ಟಿಯ ನಿಯಮಗಳ ವಿರುದ್ಧ ಹೋಗಲು ಮುಂದಾಗಿದೆ.


Provided by

 

ಒಬ್ಬ ಯುವತಿಯ ಹಣೆಯಲ್ಲಿ ಬ್ರಹ್ಮ ದೇವನು, “ನೀನು ಮುಸ್ಲಿಮನನ್ನು ಮದುವೆಯಾಗು” ಎಂದು ಬರೆದಿದ್ದರೆ, “ಪಾಪ ಆಕೆ ಏನು ತಾನೆ ಮಾಡಲು ಸಾಧ್ಯ ಹೇಳಿ?” ಒಬ್ಬ ಹಿಂದೂ ಯುವಕನ ಹಣೆಯಲ್ಲಿ ನೀನು ಕ್ರೈಸ್ತ ಯುವತಿಯನ್ನು ಮದುವೆಯಾಗು ಎಂದು ಬರೆದಿದ್ದರೆ, ಪಾಪ ಆ ಯುವಕ ಏನು ತಾನೆ ಮಾಡಲು ಸಾಧ್ಯ? ಅದು ಬ್ರಹ್ಮದೇವನ ಲಿಖಿತವಲ್ಲವೇ? ಬ್ರಹ್ಮದೇವ ಯಾಕೆ ಲವ್ ಜಿಹಾದ್ ನಡೆಯಬೇಕು ಎಂದು ಬಯಸಿದ್ದಾನೆ? ಅದು ಆತನ ಸೃಷ್ಟಿಯ ನಿಯಮವಾಗಿರಬಹುದಲ್ಲವೇ? ಯಾವುದೇ ಒಬ್ಬ ವ್ಯಕ್ತಿ ಏನೇ ತಪ್ಪು ಮಾಡಿದರೂ, ಅದಕ್ಕೆ ಬ್ರಹ್ಮ ದೇವನ ಬರಹವೇ ಕಾರಣವಲ್ಲವೇ? ಹಾಗಿದ್ದರೆ, ಲವ್ ಜಿಹಾದ್ ನಡೆಯುವುದು ಬೇಡ ಎಂದು ಯಾವುದಾದರೂ ಯಜ್ಞ ಮಾಡಿಸಿ ಬಿಟ್ಟರೆ, ದೇಶದಲ್ಲಿ ಎಲ್ಲಾದರೂ ಲವ್ ಜಿಹಾದ್ ನಡೆಯಲು ಸಾಧ್ಯವೇ? ಆರೆಸ್ಸೆಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂದು ಹೇಳಿದರು. ಅದೂ ಕೂಡ ಬ್ರಹ್ಮನ ಬರಹವೇ ಆಗಿದೆ. ಉಳ್ಳಾಲ ಪಾಕಿಸ್ತಾನವಾಗಬೇಕು ಎಂದು ಬ್ರಹ್ಮ ಬರೆದಿದ್ದರೋ ಏನೋ ಯಾರಿಗೆ ಗೊತ್ತು? ಅಥವಾ ಉಳ್ಳಾಲವನ್ನು ಪಾಕಿಸ್ತಾನ ಎಂದು ಹೇಳು ಎಂದು ಬ್ರಹ್ಮ ಪ್ರಭಾಕರ್ ಭಟ್ ಅವರ ಹಣೆಯಲ್ಲಿ ಬರೆದಿದ್ದರೋ ಏನೋ? ಇದೆಲ್ಲ, ಮನುಷ್ಯ ಮಾತ್ರರಾದವರಿಗೆ ಹೇಳಲು ಸಾಧ್ಯವೇ?

 

ಯಾರ ಹಣೆಯಲ್ಲಿ ಏನು ಬರೆದಿದ್ದಾರೋ ಅದೇ ನಡೆಯುತ್ತದೆ ಎಂಬ ಬ್ರಹ್ಮನ ಸೃಷ್ಟಿ ನಿಯಮದ ವಿರುದ್ಧ ಬಿಜೆಪಿ ನಿಂತಿದೆ. ಇದು ಹಿಂದೂ ವಿರೋಧಿ ಕೂಡ ಹೌದು. ಎಲ್ಲೋ ಒಂದೆರಡು ಅಂತರ್ ಧರ್ಮೀಯ ಮದುವೆ ನಡೆಯುತ್ತದೆ. ಆ ಪ್ರಕರಣಗಳನ್ನು ಹಿಡಿದು ಕೊಂಡು ಬಿಜೆಪಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಲು ಹೊರಟಿದೆ. ಈ ರೀತಿಯ ಕೆಟ್ಟ ಕೆಲಸ ಮಾಡಿ, ಮುಂದಿನ ಚುನಾವಣೆಯಲ್ಲಿ ದೇಶಾದ್ಯಂತ ಸೋತು ಹೋಗಿ ಎಂದು ಬ್ರಹ್ಮ ಬಿಜೆಪಿಯ ಹಣೆ ಬರಹ ಬರೆದಿದ್ದಾರೋ ಯಾರಿಗೆ ಗೊತ್ತು? ಅಂತೂ ಅವರು ಅದೇ ರೀತಿ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಎಂದು ಕೆಲವು ಸ್ವಯಂ ಘೋಷಿತ ಹಿಂದೂ ಸಂಘಟನೆಗಳು ಎಷ್ಟು ಪೂಜೆ ಮಾಡಿದರು, ಆದರೆ, ಭಾರತೀಯರನ್ನು ಹೊಲಸು ಎಂದು ಹೇಳು ಎಂದು ಬ್ರಹ್ಮ ಟ್ರಂಪ್ ನ ಹಣೆಯಲ್ಲಿ ಬರೆದಿದ್ದು ಅವರು ಹೇಳಿದರು, ಅವರ ತಪ್ಪೇನೂ ಇಲ್ಲವಲ್ಲ. ವಿಧಿ ಲಿಖಿತಕ್ಕೆ ಯಾರು ಹೊಣೆ? ಟ್ರಂಪ್ ಈ ರೀತಿಯ ಹೇಳಿಕೆ ನೀಡಲಿ, ಅದರಿಂದ ಸೋತು ಹೋಗಲಿ ಎಂಬ ಬ್ರಹ್ಮ ಲಿಖಿತವನ್ನು ಯಾರಿಂದಾದಲೂ ಬದಲಿಸಲು ಸಾಧ್ಯವೇ?

 

ಅಂತೂ ಧರ್ಮದ ಕುರಿತು ಯಾವುದೇ ವಿಮರ್ಷೆಗಳನ್ನು ಮಾಡಿದರೂ ಅದು ಧಾರ್ಮಿಕ ನಂಬಿಕೆಗೆ ಧಕ್ಕೆ ಎಂದು ವಾದಿಸುವ ಬಿಜೆಪಿ ಮುಖಂಡರು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಬಾರಿ, ಅಂತರ್ ಧರ್ಮೀಯ ವಿವಾಹಗಳಿಗೆ ನಿರ್ಬಂಧ ಹಾಕುವ ಬಗ್ಗೆ ಮಾತನಾಡಿ, ಮತ್ತೆ ರಾಜಕೀಯ ಆರಂಭಿಸಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ಪ್ರತಿಯೊಬ್ಬನೂ ತಾನು ಇಷ್ಟಪಡುವ ಧರ್ಮದಲ್ಲಿ ಬದುಕಲು ಸಾಧ್ಯವಿದೆ. ಒಂದೆಡೆಯಲ್ಲಿ, ಮನುವಾದಿಗಳ ಅಟ್ಟಹಾಸ ತಾಳಲಾರದೆ ಈ ಧರ್ಮವೇ ಬೇಡ ಎಂದು ಬೌದ್ಧ ಧರ್ಮಕ್ಕೆ ಜನರು ಮತಾಂತರವಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಲವ್ ಜಿಹಾದ್ ಎನ್ನುವ ಸುಳ್ಳು ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿಯು ಧಾರ್ಮಿಕ ಸ್ವಾತಂತ್ರವನ್ನು ಕಡಿದು ಹಾಕಲು ಮುಂದಾಗಿದೆ. ಇವೆಲ್ಲವನ್ನೂ ಪ್ರಶ್ನಿಸುವ ಸಲುವಾಗಿಯೇ ಈ ವಿಡಂಬನಾತ್ಮಕ ಮತ್ತು ವಾಸ್ತವವನ್ನು ತೆರೆದಿಡುವುದೇ ನಮ್ಮ ಜವಾಬ್ದಾರಿಯಾಗಿದೆ.

ಇತ್ತೀಚಿನ ಸುದ್ದಿ