ತನ್ನ ಸಹೋದ್ಯೋಗಿ ಮನೆಗೆ ನುಗ್ಗಿ ಆತನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಸೆಕ್ಯೂರಿಟಿ ಗಾರ್ಡ್
ಪುಣೆ: ಸೆಕ್ಯೂರಿಟಿ ಗಾರ್ಡ್ ಒಬ್ಬ ತಡರಾತ್ರಿಯಲ್ಲಿ ತನ್ನ ಸಹೋದ್ಯೋಗಿಯ ಮನೆಗೆ ನುಗ್ಗಿ ಆತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ಅತ್ಯಾಚಾರ ನಡೆದಿದೆ. ಅತ್ಯಾಚಾರ ಆರೋಪಿ ಹಾಗೂ ಸಂತ್ರಸ್ತೆಯ ಪತಿ ಒಂದೇ ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸಂತ್ರಸ್ತ ಮಹಿಳೆಯು ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಹೇಳಲಾಗಿದೆ. ರಾತ್ರಿ ವೇಳೆ ಆರೋಪಿಯು ತನ್ನ ಸಹೋದ್ಯೋಗಿ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ.
ಅಕ್ಟೋಬರ್ 26 ಮತ್ತು ನವೆಂಬರ್ 2ರಂದು ಆರೋಪಿ ಎರಡು ಬಾರಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಸೆಕ್ಯೂರಿಟಿ ಗಾರ್ಡ್ ರಾತ್ರಿ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿಯು ಸದ್ದಿಲ್ಲದೇ ಸ್ಥಳದಿಂದ ತೆರಳಿ ಈ ಕೃತ್ಯ ನಡೆಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಇದಕ್ಕಾಗಿ ಆಕೆ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದಳು ಎಂದು ಪೊಲೀಸರು ತನಿಖೆಯ ಬಳಿಕ ತಿಳಿಸಿದ್ದಾರೆ.