ಬಜಾಲ್: ಗುಡ್ಡದ ಕೆಸರು ಮಿಶ್ರಿತ ನೀರಿನಿಂದ ಸಾರ್ವಜನಿಕರಿಗೆ ತೊಂದರೆ: ಶೀಘ್ರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಗೆ ಒಳಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಮುಖ್ಯರಸ್ತೆಯ ಬಳಿ ಗುಡ್ಡದಂತಿರುವ ಜಾಗವೊಂದರಿಂದ ಪ್ರತೀ ವರುಷ ಮಳೆಗಾಲದ ವೇಳೆ ಕೆಸರು ಮಿಶ್ರಿತ ನೀರು ಹರಿದು ಬಂದು ರಸ್ತೆಯುದ್ದಕ್ಕೂ ಹರಡಿ ರಸ್ತೆಯಲ್ಲಿ ಸಾಗುವ ನಾಗರೀಕರ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಮಳೆಗಾಲದಲ್ಲಿ ರಭಸವಾಗಿ ಬೀಳುವ ಮಳೆಯಿಂದ ಗುಡ್ಡದ ಮಣ್ಣು ಕರಗಿ ಕೆಸರು ರೂಪದಲ್ಲಿ ಹರಿದು ಮುಖ್ಯ ರಸ್ತೆ ಸಹಿತ, ತೋಡು, ಚರಂಡಿ ಎಲ್ಲೆಂದರಲ್ಲೂ ಶೇಖರಣೆಗೊಂಡು ಮಳೆ ನೀರು ಹರಿದು ಹೋಗಲು ಅಡಚಣೆಯುಂಟಾಗಿದೆ. ಅಲ್ಲದೇ ಮುಖ್ಯರಸ್ತೆಯಾದ್ಯಂತ ಕೆಸರು ತುಂಬಿ ಜನಸಾಮಾನ್ಯರಿಗೆ ನಡೆದಾಡಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಮುಂದೆ ಇದೇ ರೀತಿ ನಿರಂತರ ಮಳೆ ಸುರಿದರೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೂ ನುಗ್ಗಿ ಬಹಳಷ್ಟು ತೊಂದರೆಗೆ ಸಿಲುಕುವ ಅಪಾಯ ಎದುರಾಗಲಿದೆ. ಈ ಬಗ್ಗೆ ಪಾಲಿಕೆ ಆಡಳಿತ ಕೂಡಲೇ ಎಚ್ಚೆತ್ತು ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯಿಸಿದೆ.
ಬಜಾಲ್ ಜಲ್ಲಿಗುಡ್ಡೆಯ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಸುಮಾರು 3 ಎಕರೆಯಷ್ಷಿರುವ ಈ ಗುಡ್ಡ ಯಾರದೋ ಖಾಸಗೀ ವ್ಯಕ್ತಿಗಳಿಗೆ ಸೇರಿದ ಜಾಗವಾಗಿದೆ. ಕೆಲವರು ಇದು ಶಾಸಕ ವೇದವ್ಯಾಸ ಕಾಮತರಿಗೆ ಸೇರಿರುವ ಜಾಗವಾಗಿರಬಹುದೆಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಖಾಸಗೀ ಗುಡ್ಡದಿಂದಾಗುವ ಸಮಸ್ಯೆಗಳನ್ನು ಬಗೆಹರಿಸಲು ಯಾರೊಬ್ಬರು ಈವರೆಗೂ ಮುಂದಾಗಿಲ್ಲ. ಬರೀ ಜೆಸಿಬಿಯೊಂದರಲ್ಲಿ ಮಣ್ಣು ತೆಗೆದು ಮತ್ತದೇ ರಸ್ತೆ ಬದಿಯಲ್ಲಿ ರಾಶಿ ಹಾಕಲಾಗುತ್ತದೆ ಹೊರತು ಸಮಸ್ಯೆಯ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ. ಅತೀ ಸಡಿಲ ಮಣ್ಣು ತುಂಬಿರುವ ಈ ಗುಡ್ಡ ಮಳೆಗಾಲದಲ್ಲಿ ಸುರಿಯುವ ಸಣ್ಣ ಮಳೆಗೂ ಕುಸಿಯುತ್ತಲೇ ಇದ್ದು ಒಂದು ವೇಳೆ ದೊಡ್ಡ ಮಟ್ಟದಲ್ಲಿ ಕುಸಿತಗೊಂಡರೆ ಹತ್ತಿರದ ಹಲವಾರು ಮನೆಗಳಿಗೆ, ಸಾರ್ವಜನಿಗೆ ಸಂಪತ್ತುಗಳಿಗೆ ಹಾನಿಯಾಗುವ ಸಂಭವವಿದೆ. ಈಗಾಗಲೇ ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಮತ್ತು ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಸ್ಥಳೀಯರಲ್ಲಿ ಕೇಳಿ ಬರುತ್ತಿದೆ. ಪ್ರತೀ ವರುಷ ಇದರಿಂದ ತೊಂದರೆಗೊಳಗಾಗುವ ಜನ ಬಜಾಲ್ ವಾರ್ಡ್ ಹೋರಾಟ ಸಮಿತಿ ಮುಖಂಡರ ಜೊತೆ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಹೋರಾಟ ಸಮಿತಿ ಮುಖಂಡರ ನಿಯೋಗ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದೆ.
ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಈ ಕೂಡಲೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯ ಮುಖ್ಯರಸ್ತೆ ಬಳಿಯಲ್ಲಿ ಕುಸಿತದ ಭೀತಿಯಲ್ಲಿರುವ ಗುಡ್ಡದಿಂದ ಹರಿದು ಬರುವ ಕೆಸರು ಮಿಶ್ರಿತ ಮಳೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈಗಾಗಲೇ ರಸ್ತೆಯುದ್ದಕ್ಕೂ ಹರಿದು ಬಂದಿರುವ ಕೆಸರನ್ನು ತೆರವುಗೊಳಿಸಲು ಮುಂದಾಗಬೇಕೆಂದು ಇಲ್ಲವಾದಲ್ಲಿ ಈ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: