ಇದು ರಾಜಕೀಯ ಮಾಡುವ ವಿಷಯವಲ್ಲ: ಗಳಗಳನೇ ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಐಪಿಎಲ್ ನಲ್ಲಿ ಕಪ್ ಗೆದ್ದ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವ 11 ಜೀವಗಳನ್ನು ಬಲಿ ಪಡೆದಿದೆ. ಘಟನೆಯು ಇದೀಗ ರಾಜಕೀಯ ಟೀಕೆ ಟಿಪ್ಪಣಿಗೆ ಕಾರಣವಾಗಿದೆ. ಈ ನಡುವೆ 11 ಜನರ ಸಾವಿನ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾವುಕರಾಗಿ ಗಳಗಳನೇ ಅತ್ತು ಕಣ್ಣೀರು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಲ್ತುಳಿತ ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧ, ಇದು ರಾಜಕೀಯ ಮಾಡುವ ಸಮಯವಲ್ಲ, ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರೊಂದಿಗೆ ಗಟ್ಟಿಯಾಗಿ ನಿಲ್ಲುವ ಸಮಯ ಎಂದು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದರು.
“ಬಿಜೆಪಿ ಅವಧಿಯಲ್ಲಿ ಏನೆಲ್ಲಾ ಆಯ್ತು ಎಂದು ನಾನು ಚರ್ಚೆ ಮಾಡಲ್ಲ. ಬಿಜೆಪಿ ಹಾಗೂ ಜೆಡಿಎಸ್ ಯಾವತ್ತೂ ಹೆಣದ ಮೇಲೆ ರಾಜಕೀಯ ನಡೆಸಿದೆ. ನಾನು ಹಾಗೆ ಮಾಡುವುದಿಲ್ಲ. ಇದು ನಮ್ಮ ರಾಜ್ಯ ಮತ್ತು ನಗರದ ವರ್ಚಸ್ಸಿನ ಪ್ರಶ್ನೆ. ನಾವು ಇದಕ್ಕೆ ಹೊಣೆ ಹೊತ್ತುಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
“ನಾವು ಹೀಗಾಗಲಿದೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಜನರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೆಟ್ರೋ ಸಂಚಾರ ಕೂಡಾ ನಿಲ್ಲಿಸಿದ್ದೆವು. ಆದರೂ ಅಪಾರ ಜನಸ್ತೋಮವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಇದು ನಮ್ಮ ಕುಟುಂಬಕ್ಕೆ ಆದ ನೋವು. ಈ ನೋವನ್ನು ತಡೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಾನು ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಮಕ್ಕಳ ಸ್ಥಿತಿ ನೋಡಿ ನನಗೆ ಬೇಸರ ಆಗಿದೆ ಎಂದರು.
ಪೊಲೀಸ್ ಕಮಿಷನರ್ ನನ್ನ ಬಳಿ ಬಂದು ಚಿನ್ನಸ್ವಾಮಿ ಸಮೀಪ ಕಾಲ್ತುಳಿತ ಸಂಭವಿಸಿದೆ, ಬೇಗ ಕಾರ್ಯಕ್ರಮ ಬೇಗ ಮುಗಿಸುವಂತೆ ಹೇಳಿದರು. ನಾನೂ ಕೂಡಲೇ ಕೆಸಿಎ ಆಡಳಿತ ಮಂಡಳಿಗೆ ಸೂಚನೆ ನೀಡಿ, ಕಾರ್ಯಕ್ರಮ ನಿಲ್ಲಿಸಿದೆ. ಅವರೂ ಕೂಡ ತಡಮಾಡದೇ ವಿಜಯೋತ್ಸವ ಕಾರ್ಯಕ್ರಮವನ್ನು ನಿಲ್ಲಿಸಿದರು. ಕ್ರೀಡಾಂಗಣಕ್ಕೆ ಹೋಗುವ ತನಕ ನನಗೂ ಕಾಲ್ತುಳಿತ ಪ್ರಕರಣ ಗೊತ್ತಿರಲಿಲ್ಲ. ಮಾಧ್ಯಮಗಳ ಮೂಲಕವೇ ನನಗೆ ಗೊತ್ತಾಯ್ತು ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: