ಬೆಂಗಳೂರು ಸೌತ್ ಜಿಲ್ಲೆ — ಅಭಿವೃದ್ಧಿ ಯೋಜನೆಗಳು

- ದಮ್ಮಪ್ರಿಯ, ಬೆಂಗಳೂರು
ಇತ್ತೀಚೆಗೆ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ಸೌತ್ ಜಿಲ್ಲೆ ಎಂದು ಮರು ನಾಮಕರಣ ಮಾಡಿರುವುದು ಬಹಳ ಸ್ವಾಗತಾರ್ಹವಾಗಿದೆ. ಒಂದು ಕಾಲದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಜಿಲ್ಲೆಯನ್ನು, ರಾಮನಗರ ಜಿಲ್ಲೆಯಾಗಿ ನಾಮಕರಣ ಮಾಡಿ ಬೆಂಗಳೂರಿನಿಂದ ಬೇರ್ಪಡಿಸಿ ಅಭಿವೃದ್ಧಿಯಲ್ಲಿ ಹಿಂದುಳಿಯುವಂತೆ ಮಾಡಲಾಗಿತ್ತು. ಒಂದು ವೇಳೆ ರಾಮನಗರ ಜಿಲ್ಲೆ ಎಂದು ನಾಮಕರಣವಾಗದೆ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಈ ಜಿಲ್ಲೆ ಸೇರ್ಪಡೆಯಾಗುತ್ತಿತ್ತೋ ಏನೋ !
ಇಂತಹ ಅಭಿವೃದ್ಧಿಯನ್ನು ಕೈಗೆತ್ತಿಕೊಂಡ ಇಂದಿನ ಘನ ಸರ್ಕಾರ “ಬೆಂಗಳೂರು ಸೌತ್ ಜಿಲ್ಲೆ” ಯನ್ನಾಗಿ ಮರು ನಾಮಕರಣ ಮಾಡಿರುವುದು ಬಹಳ ಸಂತೋಷದ ವಿಚಾರವಾಗಿದೆ. ಅಷ್ಟಕ್ಕೇ ಮಾತ್ರ ರಾಜ್ಯ ಸರ್ಕಾರ ಸೀಮಿತವಾಗದೆ ಇನ್ನು ಹಲವಾರು ಐತಿಹಾಸಿಕ ಅಭಿವೃದ್ದಿ ಯೋಜನೆಗಳನ್ನು ಈ ಜಿಲ್ಲೆಯಲ್ಲಿ ಕೈಗೊಳ್ಳುವುದು ಬಹಳ ಮುಖ್ಯವಾದದ್ದು, ಇವುಗಳು ಇಲ್ಲಿನ ಜನಸಾಮಾನ್ಯರ ಅಭಿವೃದ್ದಿಯೆಂದು ತಿಳಿದು ಕೈಗೊಂಡರೆ ಮಾತ್ರ ಇದನ್ನು ಮುಂದುವರೆದ ಅಥವಾ ನವ ಬೆಂಗಳೂರು ಎಂತಲೂ ಹೊರಗಿನವರು ಗುರುತಿಸಬಹುದು ಎನ್ನುವುದು ನಮ್ಮ ಅಭಿಪ್ರಾಯ.
ಅಂತಹ ಅಭಿವೃದ್ಧಿ ಯೋಜನೆಗಳಲ್ಲಿ ಬಹಳ ಮುಖ್ಯವಾದವುಗಳು ಬಿಡದಿ ಮತ್ತು ಹಾರೋಹಳ್ಳಿಯಂತಹ ಉಪ ನಗರಗಳ ವರೆವಿಗೂ ಮೆಟ್ರೋ ಕಾಮಗಾರಿಯನ್ನು ಕೈಬಿಡದೆ ಪೂರೈಸುಬೇಕಾಗಿದೆ. ಹಾರೋಹಳ್ಳಿಯಂತಹ ಕೈಗಾರಿಕಾ ಪ್ರದೇಶಗಳಲ್ಲಿ ಸಾಫ್ಟ್ ವೇರ್ ಕಂಪನಿಗಳಿಗೂ ಅಹ್ವಾನ ನೀಡಬೇಕಾಗಿದೆ. ಅಲ್ಲದೆ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಬೇಕಿದೆ, ದಕ್ಷಿಣ ಜಿಲ್ಲೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಏರ್ಪೋರ್ಟ್ ವ್ಯವಸ್ಥೆ ನಿರ್ಮಾಣ ಮಾಡುವ ಅನಿವಾರ್ಯತೆ ಪ್ರಮುಖವಾಗಿದೆ.
ಇದರ ಜೊತೆಗೆ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ಸುದ್ದಿಯೆಂದರೆ ಸುಮಾರು 60 ಎಕರೆ ಯಲ್ಲಿ ನಿರ್ಮಾಣ ಮಾಡಬೇಕು ಎಂದಿರುವ, 11 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕ್ರೀಡಾನಗರವನ್ನು ಈ ಜಿಲ್ಲೆಯಲ್ಲಿ ನಿರ್ಮಾಣ ಮಾಡಿದ್ದೆ ಆದರೆ ಇಡೀ ವಿಶ್ವವೇ ಈ ಜಿಲ್ಲೆಯ ಕಡೆಗೆ ಮುಖಮಾಡುತ್ತದೆ. ಇಂತಹ ಯೋಜನೆಯನ್ನು ಈ ಜಿಲ್ಲೆಗೆ ತಂದದ್ದೇ ಆದರೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದು ಸಾರ್ಥಕವಾಗುತ್ತದೆ.
ಇದು ಬೆಂಗಳೂರು ದಕ್ಷಿಣ ಜಿಲ್ಲೆಯ ಜನರಿಗೆ ಒಂದು ಬಹಳ ಹೆಮ್ಮೆಯ ವಿಚಾರವೆನಿಸುತ್ತದೆ. ಜಿಲ್ಲೆಯಲ್ಲಿರುವ ನಿರುದ್ಯೋಗಿ ಯುವಕರು ಬೇರೆ ಕಡೆ ವಲಸೆ ಹೋಗದೆ ತನ್ನ ಜಿಲ್ಲೆಯಲ್ಲಿಯೇ ಉದ್ಯೋಗ ಹರಸುವಂತಾಗುತ್ತದೆ. ರೈತರಿಗೆ ಬೇಕಾದ ಮಾರುಕಟ್ಟೆ ವ್ಯವಸ್ಥೆ ಸಿಕ್ಕಿ ರೈತರಿಗೆ ಬೆಂಬಲಿತ ಬೆಲೆಗಳು ದೊರೆತು ಅಭಿವೃದ್ಧಿ ಸಾಧಿಸಿದಂತಾಗುತ್ತದೆ. ಇವೆಲ್ಲದರ ಜೊತೆಗೆ ದೊಡ್ಡ ದೊಡ್ಡ ವಿದೇಶಿ ಬಂಡವಾಳಗಾರರು ಹೂಡಿಕೆದಾರರಾಗಿ ಬಂದರೆ ಇಡೀ ಜಿಲ್ಲೆಯಲ್ಲಿನ ಯುವಕರ ನಿರುದ್ಯೋಗ ನಿವಾರಣೆಯಾಗಿ ಆರ್ಥಿಕ ಭದ್ರತೆ ದೊರಕಿದಂತಾಗುತ್ತದೆ. ಬೆಂಗಳೂರಿಗೆ ಬೇಕಾದ ಒಂದು ಪ್ರತ್ಯೇಕ ಕ್ರೀಡಾನಗರ ಬೆಂಗಳೂರು ದಕ್ಷಿಣ ಎಂದಾದರೆ ಇಡೀ ಜಗತ್ತಿನ ಒಂದು ಹೆಮ್ಮೆಯ ಜಿಲ್ಲೆಯಾಗುತ್ತದೆ ಎನ್ನುವುದು ನಮ್ಮ ಮಹಾದಾಸೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: