ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ದಿಢೀರ್ ಭೇಟಿ: ತುರ್ತು ವರದಿಗೆ ಕಟ್ಟುನಿಟ್ಟಿನ ಸೂಚನೆ - Mahanayaka

ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ದಿಢೀರ್ ಭೇಟಿ: ತುರ್ತು ವರದಿಗೆ ಕಟ್ಟುನಿಟ್ಟಿನ ಸೂಚನೆ

layla
26/07/2026

ಬೆಳ್ತಂಗಡಿ: ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಎಂಬಲ್ಲಿರುವ ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮನು ಬಿ.ಕೆ. ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ರಾಮಲಿಂಗಪ್ಪ ಅವರು ಭಾನುವಾರ ಸಂಜೆ ಖುದ್ದಾಗಿ ಭೇಟಿ ನೀಡಿ ವೀಕ್ಷಿಸಿದ್ದಾರೆ.

ಕಳೆದ ಬುಧವಾರ ನಡೆದ ಲಾಯಿಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಈ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಮಾಧ್ಯಮಗಳಲ್ಲೂ ಈ ಅಪಾಯಕಾರಿ ಕಾಲುಸಂಕದ ಬಗ್ಗೆ ಸರಣಿ ವರದಿಗಳು ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಶುಕ್ರವಾರ ಅಧಿಕಾರಿಗಳ ದಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಇದೀಗ ನ್ಯಾಯಾಧೀಶರೇ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯ ಸಾರ್ವಜನಿಕರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ.

ಈ ಕಾಲುಸಂಕವನ್ನೇ ನೆಚ್ಚಿಕೊಂಡಿರುವ ಕುಟುಂಬಗಳ ವಿವರದೊಂದಿಗೆ ಹಿರಿಯ ನಾಗರಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ವಿಶೇಷ ಚೇತನರು ಹಾಗೂ ವಿಧವೆಯರ ಕುರಿತು ಪ್ರತ್ಯೇಕ ಮಾಹಿತಿ ಸಂಗ್ರಹಿಸಿ, ಸೋಮವಾರ ಮಧ್ಯಾಹ್ನದೊಳಗೆ ಪೂರ್ಣ ವರದಿ ನೀಡುವಂತೆ ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರಾನಾಥ ನಾಯ್ಕ್ ಹಾಗೂ ಗ್ರಾಮಾಡಳಿತಾಧಿಕಾರಿ ರನಿತಾ ಅವರಿಗೆ ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬರೆಮೇಲು ನಡುಗುಡ್ಡೆ ಪ್ರದೇಶಕ್ಕೆ ನ್ಯಾಯಾಧೀಶರು ನೀಡಿದ ಈ ಭೇಟಿಯಿಂದಾಗಿ, ತಮ್ಮ ಬಹುಕಾಲದ ಪಕ್ಕಾ ಸೇತುವೆಯ ಬೇಡಿಕೆ ಶೀಘ್ರದಲ್ಲೇ ಈಡೇರಲಿದೆ ಎಂಬ ಬಲವಾದ ಆಶಾಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆನಂದ, ಬೆಳ್ತಂಗಡಿ ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ, ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಯಲ್ಲಪ್ಪ ಹಂಗರಗಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ದಲಿತ ಮುಖಂಡ ಶೇಖರ್ ಲಾಯಿಲ ಹಾಗೂ ಗ್ರಾಮ ಸಹಾಯಕ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ