ಕಳ್ಳತನ ಮಾಡಲು ಹೋದಾಗ ನನಗೆ ಹಲ್ಲೆ ಮಾಡಿದ್ದಾರೆ: ವಿಚಿತ್ರ ದೂರು ನೀಡಿದ ಕಳ್ಳ, ಸ್ನೇಹಿತರ ವಿರುದ್ಧವೂ ದೂರು!
ಬೆಂಗಳೂರು: ಕಳ್ಳತನ ಮಾಡಲು ಹೋಗಿ ಸಾರ್ವಜನಿಕರಿಂದ ಏಟು ತಿಂದ ಕಳ್ಳನೋರ್ವ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಚಿತ್ರ ಘಟನೆ ಬೆಂಗಳೂರಿನ ಸಂಪಿಗೇಹಳ್ಳಿಯಲ್ಲಿ ನಡೆದಿದೆ.
ಏನಿದು ಘಟನೆ? ಅಜ್ಗರ್ ಖಾನ್ ಎಂಬ ಆಟೋ ಚಾಲಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಕಬ್ಬಿಣದ ವಸ್ತುಗಳನ್ನು ಕದಿಯಲು ಸಂಚು ರೂಪಿಸಿದ್ದ. ಪ್ಲಾನ್ ನಂತೆ ಮೂವರೂ ಅಪಾರ್ಟ್‌ಮೆಂಟ್ ಕಾಂಪೌಂಡ್ ಹಾರಿದ್ದರು. ಆದರೆ, ಅಲ್ಲಿನ ದಂಪತಿಗಳು ಇವರನ್ನು ನೋಡಿ ಪ್ರಶ್ನಿಸಿದಾಗ ಗಾಬರಿಯಾದ ಅಜ್ಗರ್ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.
ಗೆಳೆಯರು ಎಸ್ಕೇಪ್, ಸಿಕ್ಕಿಬಿದ್ದ ಅಜ್ಗರ್: ಗಲಾಟೆ ಜೋರಾದಾಗ ಸುತ್ತಮುತ್ತಲಿನ ಜನರು ಜಮಾಯಿಸಿದ್ದಾರೆ. ಇದನ್ನು ಕಂಡ ಅಜ್ಗರ್ ನ ಸ್ನೇಹಿತರು ಆತನ ಆಟೋವನ್ನೇ ಹತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಅಜ್ಗರ್ ಜನರಿಗೆ ಸಿಕ್ಕಿಬಿದ್ದಿದ್ದು, ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ‘ಧರ್ಮದೇಟು’ ನೀಡಿದ್ದಾರೆ. ಮರದ ಪೀಸ್ ಗಳಿಂದಲೂ ಆತನ ತಲೆಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ದೂರು ನೀಡಿದ ಕಳ್ಳ! ಸಾರ್ವಜನಿಕರ ಏಟಿನಿಂದ ಹೇಗೋ ತಪ್ಪಿಸಿಕೊಂಡು ಓಡಿದ ಅಜ್ಗರ್, ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾನೆ. ನಂತರ ಸಂಪಿಗೇಹಳ್ಳಿ ಪೊಲೀಸ್ ಠಾಣೆಗೆ ತೆರಳಿ, “ನಾನು ಕಳ್ಳತನಕ್ಕೆ ಹೋದಾಗ ಸಾರ್ವಜನಿಕರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ನನ್ನನ್ನು ಬಿಟ್ಟು ಓಡಿಹೋದ ಗೆಳೆಯರ ವಿರುದ್ಧವೂ ಕ್ರಮ ಕೈಗೊಳ್ಳಿ” ಎಂದು ದೂರು ನೀಡಿದ್ದಾನೆ.
ಕಳ್ಳನೇ ಸ್ವತಃ ಠಾಣೆಗೆ ಬಂದು ದೂರು ನೀಡಿರುವುದನ್ನು ಕಂಡು ಪೊಲೀಸರೇ ಅಚ್ಚರಿಗೊಂಡಿದ್ದಾರೆ. ಸದ್ಯ ಅಜ್ಗರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























