ಬಿಗ್ ಬಾಸ್ ಸ್ಪರ್ಧಿ ಚಂದ್ರಕಲಾರಿಂದ ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ | ವ್ಯಾಪಕ ಆಕ್ರೋಶ - Mahanayaka

ಬಿಗ್ ಬಾಸ್ ಸ್ಪರ್ಧಿ ಚಂದ್ರಕಲಾರಿಂದ ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ | ವ್ಯಾಪಕ ಆಕ್ರೋಶ

chandrakala
03/04/2021

ಬೆಂಗಳೂರು: ಯಾವಾಗಲೂ ಎಲ್ಲರಿಂದ ಕಾರಣವೇ ಇಲ್ಲದೇ ಅವಮಾನಕ್ಕೊಳಗಾಗುವವರು ಮಾತ್ರ ದಲಿತ ಸಮುದಾಯದವರು. ಹೌದು..! ತಲೆಯಲ್ಲಿ ಸ್ವಲ್ಪವೂ ಜ್ಞಾನವಿಲ್ಲದೇ ಮಾತನಾಡುವ ಜನರಿಂದಾಗಿ ದಲಿತ ಸಮುದಾಯ ನಿತ್ಯ ಅವಮಾನ ಎದುರಿಸುವುದು ಇಂದಿಗೂ ತಪ್ಪಿಲ್ಲ…

ಕನ್ನಡ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟ್ಟಗೌರಿ ಧಾರಾವಾಹಿಯಲ್ಲಿ ಅಜ್ಜಮ್ಮ ಪಾತ್ರ ಮಾಡಿ ಮನೆ ಮಾತಾಗಿದ್ದ ಚಂದ್ರಕಲಾ ಅವರು ಇದೀಗ ಸ್ಪರ್ಧೆಯಿಂದ ಹೊರ ಬಂದ ಬಳಿಕ ನೀಡಿರುವ ಹೇಳಿಕೆ ದಲಿತ ಸಮುದಾಯವನ್ನು ತೀವ್ರವಾಗಿ ನೋಯಿಸಿದೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಭನದಲ್ಲಿ ಚಂದ್ರಕಲಾ ಅವರು ಬಳಕೆ ಮಾಡಿದ ಆಕ್ಷೇಪಾರ್ಹ ಪದ ಇದೀಗ ಸ್ವತಃ ಅವರನ್ನು ಇಷ್ಟಪಡುತ್ತಿದ್ದ ಜನರೇ ಅವರ ವಿರುದ್ಧ ಆಕ್ರೋಶಗೊಳ್ಳುವಂತೆ ಮಾಡಿದೆ.

ವಿಜಯ ಕರ್ನಾಟಕ ಪತ್ರಿಕೆಯ ಸಂದರ್ಶನದಲ್ಲಿ ಚಂದ್ರಕಲಾ ಅವರು ನೀಡಿರುವ ಒಂದು ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಭೀಮ ವಿಜಯ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿರುವ ನಾಗರಾಜ್ ಹೆತ್ತೂರು ಫೇಸ್ ಬುಕ್ ನಲ್ಲಿ ಹಂಚಿಕೊಂಡು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ.

ವಿಡಿಯೋದಲ್ಲಿ ನಿರೂಪಕಿಯು, ಪಾಸಿಟಿವ್ ಮತ್ತು ನೆಗೆಟಿವ್ ಎರಡು ಮಾತುಗಳನ್ನು ನಿಮಗೆ ನೋಡಿದಾಗ ಏನು ಅನ್ನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚಂದ್ರಕಲಾ, ಇಲ್ಲ ನಾನು ಅದಕ್ಕೆಲ್ಲ ಅಷ್ಟು ತಲೆಕೆಡಿಸಿಕೊಳ್ಳಲ್ಲ, ಯಾಕೆಂದ್ರೆ, ಊರು ಎಂದ ಮೇಲೆ ಹೊಲೆಗೇರಿ ಇದ್ದೇ ಇರುತ್ತೆ ಎಂದು ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಳೆದ ಬಾರಿ  ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟ್ಟೂರು ಅಸ್ಪೃಶ್ಯ ಎಂಬ ಪದ ಬಳಕೆ ಮಾಡಿ ದಲಿತ ಸಮುದಾಯವನ್ನು ಕಾರಣವೇ ಇಲ್ಲದೇ ಅವಮಾನಿಸಿದ್ದರು. ಇದೀಗ ಹೊಲೆಗೇರಿ ಎಂಬ ಪದವನ್ನು ಕೀಳಾಗಿ ಬಳಸಿ ಚಂದ್ರಕಲಾ ಅವರು ಅವಮಾನಿಸಿದ್ದಾರೆ. ಇದೆಲ್ಲ ನಿಮಗೆ ಬೇಕಾ? ಅಷ್ಟಕ್ಕೂ ದಲಿತರು ನಿಮಗೆ ಏನು ತೊಂದರೆ ಮಾಡಿದ್ದಾರೆ? ಈ ರೀತಿಯ ಮಾತುಗಳನ್ನು ಯಾಕೆ ಆಡಬೇಕು? ಎನ್ನುವ ಪ್ರಶ್ನೆಗಳು ಒಂದೆಡೆ ಕೇಳಿ ಬಂದಿದ್ದರೆ. ಇನ್ನೊಂದೆಡೆ ನಟಿಯ ವಿರುದ್ಧ ದೂರು ನೀಡುವ ಮೂಲಕ ಕಾನೂನಿನ ಬಿಸಿ ಮುಟ್ಟಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ