ಶಿಕ್ಷಕಿಯ ಹೊಡೆತಕ್ಕೆ ಕಣ್ಣು ಕಳೆದುಕೊಂಡ ಬಾಲಕ: ನ್ಯಾಯಕ್ಕಾಗಿ ಬಾಲಕನ ಪೋಷಕರಿಂದ ಧರಣಿ

ಚಿಂತಾಮಣಿ: ಶಿಕ್ಷಕಿಯ ಹೊಡೆತಕ್ಕೆ 1ನೇ ತರಗತಿಯ ಬಾಲಕ ಕಣ್ಣು ಕಳೆದುಕೊಂಡಿದ್ದು, ಇದೀಗ ಬಾಲಕನ ತಂದೆ ತಾಯಿ ನ್ಯಾಯಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕು ಮುರುಗಮಲ್ಲ ಹೋಬಳಿ ವ್ಯಾಪ್ತಿಯ ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಟರಾಜ್—ಅಂಜಲಿ ದಂಪತಿ ಪುತ್ರ ಯಶವಂತ್(8) ಶಿಕ್ಷಕಿಯ ಏಟಿನಿಂದಾಗಿ ಕಣ್ಣು ಕಳೆದುಕೊಂಡ ಬಾಲಕನಾಗಿದ್ದಾನೆ.
ಶಾಲೆಯ ಶಿಕ್ಷಕಿ ಸರಸ್ವತಿ ಬೇರೊಬ್ಬ ಬಾಲಕನಿಗೆ ಕೋಲಿನಿಂದ ಹೊಡೆದಿದ್ದು, ಆ ಕೋಲು ಯಶ್ವಂತ್ ನ ಕಣ್ಣಿಗೆ ತಾಗಿ ಬಲಭಾಗದ ಕಣ್ಣಿಗೆ ಹಾನಿಯಾಗಿದೆ. ಬಾಲಕನ ಪೋಷಕರು ಕಣ್ಣಿನ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ, ವೈದ್ಯರು ಇನ್ನು ಬಾಲಕನಿಗೆ ಕಣ್ಣು ಕಾಣುವುದಿಲ್ಲ ಎಂದು ದೃಢೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಶಿಕ್ಷಕಿ ವಿರುದ್ಧ ಪೊಲೀಸ್ ಠಾಣೆಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಹೀಗಾಗಿ ನ್ಯಾಯಕ್ಕಾಗಿ ಕಣ್ಣು ಕಳೆದುಕೊಂಡಿರುವ ಯಶ್ವಂತ್ ಹಾಗೂ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದಾರೆ. ಶಿಕ್ಷಕಿಯ ವಿರುದ್ಧ ಕಾನೂನು ಕ್ರಮ ಜರಗಿಸುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಪೋಷಕರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7