ಮಗನನ್ನು ಶಾಲೆಯಿಂದ ಕರೆತರಲು ಹೋಗಿದ್ದ ತಂದೆಯನ್ನು ತಿವಿದು ಕೊಂದ ಗೂಳಿ! - Mahanayaka

ಮಗನನ್ನು ಶಾಲೆಯಿಂದ ಕರೆತರಲು ಹೋಗಿದ್ದ ತಂದೆಯನ್ನು ತಿವಿದು ಕೊಂದ ಗೂಳಿ!

subash
26/02/2024

ದೆಹಲಿ: ಇತ್ತೀಚೆನ ದಿನಗಳಲ್ಲಿ ಬೀಡಾಡಿ ಗೂಳಿ, ನಾಯಿಗಳ ಆಕ್ರಮಣಕ್ಕೆ ಜನರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚಾಗಿದೆ. ತನ್ನ ಹಿರಿಯ ಮಗನನ್ನು ಶಾಲೆಯಿಂದ ಮನೆಗೆ ಕರೆತರಲು ಹೋಗುತ್ತಿದ್ದ ವೇಳೆ ಗೂಳಿಯೊಂದರ ದಾಳಿಯಿಂದ ವ್ಯಕ್ತಿಯೊಬ್ಬರು ತನ್ನ ಜೀವ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಸುಭಾಷ್ ಕುಮಾರ್ ಝಾ(42) ಗೂಳಿಯ ದಾಳಿಯಿಂದ ಮೃತಪಟ್ಟವರಾಗಿದ್ದಾರೆ. ಕಳೆದ ಕಳೆದ ಗುರುವಾರ ದೆಹಲಿಯ ಕಲ್ಕಾಜಿ ಸೇಂಟ್ ಜಾರ್ಜ್ ಶಾಲೆಯ ಹೊರಗೆ ಸುಭಾಷ್ ಕುಮಾರ್ ಮೇಲೆ ಗೂಳಿ ದಾಳಿ ನಡೆಸಿದೆ.

ಬೆನ್ನಹಿಂದಿನಿಂದ ಬಂದು ಏಕಾಏಕಿ ದಾಳಿ ನಡೆಸಿದ ಗೂಳಿ, ನೆಲಕ್ಕೆ ಕೆಡವಿ ಮುಖ ಹಾಗೂ ಎದೆಗೆ ಪದೇ ಪದೇ ತುಳಿದು, ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ಈ ವೇಳೆ ಸ್ಥಳದಲ್ಲಿದ್ದ ಸುಭಾಷ್ ಅವರ ಮಗ ಸಹಾಯಕ್ಕಾಗಿ ಕೂಗಿದ್ದು, ದಾರಿಹೋಕರು ಗೂಳಿಯನ್ನು ಓಡಿಸಿ, ಸುಭಾಷ್ ಅವರನ್ನು ರಕ್ಷಿಸಿದ್ದು, ಹತ್ತಿರದ ಬಾತ್ರಾ ಆಸ್ಪತ್ರೆಗೆ ದಾಖಲಿಸಿದ್ದರು.

ಗೂಳಿಯ ದಾಳಿಯ ತೀವ್ರತೆಗೆ ಪಕ್ಕೆಲುಬು ಸೇರಿದಂತೆ ಅನೇಕ ಮೂಳೆಗಳು ಮುರಿತಕ್ಕೊಳಗಾಗಿದ್ದು, ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೇ ಸುಭಾಷ್ ಅವರು ಸಾವನ್ನಪ್ಪಿದ್ದಾರೆ.

ಸುಭಾಷ್ ಮೂಲತಃ ಬಿಹಾರದವರಾಗಿದ್ದು, ದೆಹಲಿಯಲ್ಲಿ ಲೋನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಈ ಪ್ರದೇಶದಲ್ಲಿ ಈ ಹಿಂದೆಯೂ ಇದೇ ರೀತಿಯ ಪ್ರಾಣಿಗಳ ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಬಿಡಾಡಿ ದನಗಳ ಸಮಸ್ಯೆಗೆ ಆಕ್ರಮಣಕ್ಕೆ ಈ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಡೈರಿಗಳೇ ಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ