ಮಾಕಳಿ ಗ್ರಾಮದ ಸರ್ವೆ ನಂ.13ರ ಕೆರೆಯನ್ನೇ ನುಂಗಿದ ಕ್ಯಾಬಿನೆಟ್ ಸಚಿವರು: ಹೆಚ್.ಡಿ.ಕುಮಾರಸ್ವಾಮಿ ಕಿಡಿ - Mahanayaka
2:05 AM Wednesday 11 - September 2024

ಮಾಕಳಿ ಗ್ರಾಮದ ಸರ್ವೆ ನಂ.13ರ ಕೆರೆಯನ್ನೇ ನುಂಗಿದ ಕ್ಯಾಬಿನೆಟ್ ಸಚಿವರು: ಹೆಚ್.ಡಿ.ಕುಮಾರಸ್ವಾಮಿ ಕಿಡಿ

HD Kumaraswamy
16/11/2023

ಬೆಂಗಳೂರು: ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಬೇಕು ಎಂದು ಒಬ್ಬ ಸಚಿವರು ಅಪ್ಪಣೆ ಕೊಡಿಸಿದ್ದಾರೆ. ಆದರೆ, ಅವರು ಒಂದು ಕೆರೆಯನ್ನೇ ನುಂಗಿ ನೀರು ಕುಡಿದಿದ್ದಾರೆ. ಅದಕ್ಕೆ ಯಾವ ತನಿಖೆ ನಡೆಸುತ್ತೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಮಂಡ್ಯ ಜಿಲ್ಲೆಯ ಮಹಾ ನಾಯಕರು ಒಬ್ಬರು ದಾಸನಪುರ ಹೋಬಳಿಯ ಸರ್ವೇ ನಂಬರ್ 13ರಲ್ಲಿರುವ ಮಾಕಳಿ ಕೆರೆಯನ್ನೇ ಸ್ವಾಹಾ ಮಾಡಿದ್ದಾರೆ. ಅವರ ಬಗ್ಗೆಯೂ ತನಿಖೆ ಮಾಡಿಸಬೇಕು ಅಲ್ಲವೇ ಎಂದು ಪ್ರಶ್ನಿಸಿದರು.

ನಾನು ಹೇಗೆ ರಾಜಕೀಯ ಮಾಡಿದೆ, ಯಾವ ರೀತಿ ನಡೆದುಕೊಂಡಿದ್ದೇನೆ ಎನ್ನುವುದನ್ನು ರಾಜ್ಯದ ಜನರು ನೋಡಿದ್ದಾರೆ. ಇವರು ಏನು ಎನ್ನುವುದು ನಾಡಿನ ಜನರಿಗೆ ಗೊತ್ತಿದೆ. ಮಾಕಳಿ ಗ್ರಾಮದ ಆ ಮೂರು ಎಕರೆ ಮೂವತ್ತು ಗುಂಟೆ ನುಂಗಿದ್ದು ಯಾರು? ನಾನು ಕೆರೆ ನುಂಗುವ ಕೆಲಸ ಮಾಡಿಲ್ಲ ಎಂದು ಅವರು ಕಿಡಿಕಾರಿದರು.


Provided by

ನಾನು ಮಾಡಿದ ಒಳ್ಳೆಯ ಕೆಲಸಕ್ಕೆ ಯಾರೋ ಪುಣ್ಯಾತ್ಮರು ಕೊಡುವ ಹಣದಲ್ಲಿ ಚುನಾವಣೆ ನಡೆಸಿದ್ದೇನೆ. ಬಲಗೈಯಲ್ಲಿ ಬಂದಿದ್ದನ್ನು ಎಡಗೈನಲ್ಲಿ ಹಂಚಿದೇನೆ. ಇವತ್ತು ಕುಮಾರಸ್ವಾಮಿ ಆಸ್ತಿ ತನಿಖೆ ಮಾಡಿ ಎಂದು ಆ ಸಚಿವರು ಹೇಳ್ತಾ ಇದ್ದಾರಲ್ಲ, ಅಂದು ಫ್ರೀಡಂ ಪಾರ್ಕ್ ನಲ್ಲಿ ನನ್ನ ಆಸ್ತಿ ತನಿಖೆ ಮಾಡಿ ಅಂತ ನಾನೇ ಧರಣಿ ಕುಳಿತಿದ್ದೆ. ಆ ದಿನ ನನ್ನ ಪಕ್ಕ ಕುಳಿತಿದ್ದವರೇ ಇವತ್ತು ಕುಮಾರಸ್ವಾಮಿ ಆಸ್ತಿ ತನಿಖೆ ಮಾಡಿ ಅಂತಾ ಹೇಳ್ತಾ ಇದ್ದಾರೆ ಎಂದು ಅವರು ಹೇಳಿದರು.

ನಾನು ಸಿನಿಮಾ ಹಂಚಿಕೆದಾರ ಆಗಿದ್ದಾಗ ಬಿಡದಿಯಲ್ಲಿ ಜಮೀನು ಖರೀದಿ ಮಾಡಿ ತೋಟ ಮಾಡಿದ್ದೇನೆ. ಕಸ್ತೂರಿ ಚಾನಲ್ ಮಾಡಿದ್ದೆ. ಅದರ ಕಷ್ಟ ಅನುಭವಿಸಿದವನಿಗೇ ಗೊತ್ತು. ಅದೆಲ್ಲಾ ಕಷ್ಟ ನನಗೆ ಗೊತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ