ದೈವರಾಧನೆಗೆ ಚೇತನ್ ಅವಮಾನ ಮಾಡಿಲ್ಲ, ಆದರೂ ಯಾಕೆ ಈ ವಿವಾದ? - Mahanayaka

ದೈವರಾಧನೆಗೆ ಚೇತನ್ ಅವಮಾನ ಮಾಡಿಲ್ಲ, ಆದರೂ ಯಾಕೆ ಈ ವಿವಾದ?

chethan
23/10/2022

ದೈವಾರಾಧನೆ ವಿಚಾರವಾಗಿ ನಟ ಚೇತನ್ ಅವರು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂಬ ವಾದ ಇದೀಗ ಬಲವಾಗಿ ಕೇಳಿ ಬರುತ್ತಿದ್ದು, ನಟ ಚೇತನ್ ದೈವರಾಧನೆಯ ವಿರುದ್ಧವಾಗಿ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಅವರು ದೈವಾರಾಧನೆ ವಿರುದ್ಧ ಮಾತನಾಡಿದ್ದಾರೆ ಎಂಬಂತೆ ಬಿಂಬಿಸುತ್ತಿರುವ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಚೇತನ್ ನೀಡಿರುವ ಹೇಳಿಕೆಯ ವಾಸ್ತವಾಂಶ ಅರಿವಾದ ಸಾಕಷ್ಟು ಜನರು ಚೇತನ್ ಗೆ ಬೆಂಬಲ ಸೂಚಿಸಿದ್ದಾರೆ. ಚೇತನ್ ಕಾಂತಾರ ಚಿತ್ರದ ಕುರಿತು ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪ್ರತಿಭೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ, ದೈವಾರಾಧನೆ ಅನ್ನೋದು ಹಿಂದೂ ಧರ್ಮದ ಭಾಗ ಅನ್ನುವ ಹೇಳಿಕೆಯನ್ನು ವಿರೋಧಿಸಿರುವ ಚೇತನ್, ಹಿಂದೂ ಧರ್ಮಕ್ಕಿಂತಲೂ ಹೆಚ್ಚಿನ ಇತಿಹಾಸ ದೈವಾರಾಧನೆಗೆ ಇದೆ. ಇದು ಆದಿವಾಸಿಗಳ, ಬಹುಜನರ, ದೇಶದ ಮೂಲನಿವಾಸಿಗಳ ಆಚರಣೆ ಎಂದು ಹೇಳಿದ್ದಾರೆ. ಇದರಲ್ಲಿ ವಿವಾದ ಮಾಡುವಂತಹದ್ದು ಏನಿದೆ ? ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಹಿರಿಯ ಪೇಜಾವರ ಶ್ರೀಗಳು ಸಂದರ್ಶನವೊಂದರಲ್ಲಿ ಕೆಲವು ಬ್ರಾಹ್ಮಣರು ಕದ್ದು ಮದ್ಯ ಮಾಂಸಾಹಾರ ಸೇವಿಸುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಆದರೆ ಇದು ವಿವಾದಕ್ಕೀಡಾಗಲಿಲ್ಲ, ಅವರು ಹಿಂದೂ ವಿರೋಧಿಯೂ ಆಗಲಿಲ್ಲ.  ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧವಿಲ್ಲ ಎಂದು ನೇರವಾಗಿ ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು. ಇಂತಹ ಸಂದರ್ಭದಲ್ಲಿಯೂ ಪೇಜಾವರಶ್ರೀಗಳು ಹಿಂದುತ್ವ ವಿರೋಧಿ ಅಂತ ಯಾರೂ ಕರೆಯಲಿಲ್ಲ.. ಆದರೆ, ದೈವಾರಾಧನೆ ಹಿಂದೂ ಧರ್ಮದ ಭಾಗ ಅಲ್ಲ ಅಂತ ಚೇತನ್ ಹೇಳಿಕೆ ನೀಡಿರೋದು ಯಾಕೆ ವಿವಾದವಾಯ್ತು? ಅನ್ನೋ ಪ್ರಶ್ನೆ ಇದೀಗ ಕೇಳಿ ಬಂದಿದೆ.

ತುಳುನಾಡಿನ ಪಾರ್ದಾನದಲ್ಲಿ ಬರುವ ಪಂಜುರ್ಲಿ ದೈವಕ್ಕೂ ಪುರಾಣದಲ್ಲಿನ ವಿಷ್ಣುವಿನ ವರಹ ಅವತಾರಕ್ಕೂ ಸಂಬಂಧ ಕಲ್ಪಿಸುವ ಮೂಲಕ ದೈವಾರಾಧನೆಯನ್ನು ವೈದಿಕ ಆಚರಣೆಗೊಳಪಡಿಸುವ ಪ್ರಯತ್ನ ದೈವದ ಪಾವಿತ್ರ್ಯತೆಗೆ ಧಕ್ಕೆ ತರುವಂತಹದ್ದಲ್ಲವೇ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ದೈವಾರಾಧನೆ ಅನ್ನೋದು ಜನಪದವಾಗಿ ಬಂದಿರೋದು. ಪಾರ್ದನ ಅಥವಾ ಸಂದಿಯಲ್ಲಿ ದೈವದ ಕಥೆಗಳನ್ನು ಹೇಳುತ್ತಾರೆ. ರಿಷಬ್ ಶೆಟ್ಟಿ ಅವರ ತಂದೆ ರಾಮಾಯಣದಲ್ಲಿ ಗುಳಿಗ ದೈವ ಇರೋದು ಅಂತ ವಾದ ಮಾಡ್ತಿದ್ದಾರೆ. ಇದು ತುಳುನಾಡಿನ ನೆಲ ಮೂಲದ ಸಂಪ್ರದಾಯಗಳಿಗೆ ಮಾಡುತ್ತಿರುವ ಅವಮಾನ ಅಲ್ಲವೇ? ಎಂಬ ಪ್ರಶ್ನೆಗಳೂ ಇವೆ.

ಚೇತನ್ ಮಾತನಾಡಿರೋದು ದೈವಾರಾಧನೆಯನ್ನು ಬ್ರಾಹ್ಮಣ್ಯದ ಭಾಗ ಮಾಡಲು ಹೊರಟಿರುವವರ ವಿರುದ್ಧ. ಇದರ ವಿರುದ್ಧ ಮಾತನಾಡದೇ ಹೋದರೆ, ಮುಂದೊಂದು ದಿನ ದೈವಗಳಿಗೂ ಮಂತ್ರ ಹೇಳಿ ದೈವರಾಧನೆ ಮಾಡುವ ಸಂಪ್ರದಾಯಗಳು ಆರಂಭವಾದರೂ ಆಗಬಹುದು ಅನ್ನೋ ಆತಂಕ ಇದೆ. ಮಂತ್ರ ಹೇಳಿ ಆಚರಣೆ ಮಾಡಿದರೆ ಏನು ತಪ್ಪು. ಮಂತ್ರ  ಕೂಡ ಹಿಂದೂ ಧರ್ಮದಲ್ಲವೇ ಅನ್ನೋ ವಾದಗಳು ಇರಬಹುದು ಆದರೆ, ಮಂತ್ರ ಹೇಳಿ ದೈವಾರಾಧನೆ ಮಾಡುವ ಸ್ಥಿತಿ ಬಂದರೆ, ದೈವಾರಾಧಕರು ದೈವಸ್ಥಾನದ ಹೊರಗೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸೂಕ್ಷ್ಮತೆಗಳನ್ನು ಅರಿತುಕೊಂಡೇ ನಟ ಚೇತನ್ ಈ ಹೇಳಿಕೆ ನೀಡಿದ್ದಾರೆ ಎನ್ನುವ ಚರ್ಚೆಗಳು ಇದೀಗ ಆರಂಭವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ