ಚಿಕ್ಕಮಗಳೂರು: ಮಾಂಜಾ ದಾರದಂತೆ ಮಾರಕವಾದ ಹಗ್ಗ; ಸ್ಕೂಟರ್ ಸವಾರ ದುರ್ಮರಣ
ಚಿಕ್ಕಮಗಳೂರು: ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ನಗರದ ತೇಗೂರು ಗ್ರಾಮದಲ್ಲಿ ಜರುಗಿದೆ.
ಚಿಕ್ಕಮಗಳೂರು ನಗರದ ಸೈಯದ್ ಗಲ್ಲಿಯ ನಿವಾಸಿ ಮಹಮ್ಮದ್ ಗೌಸ್ ಖಾನ್ (36) ಮೃತಪಟ್ಟ ದುರ್ದೈವಿ.
ಘಟನೆಯ ವಿವರ: ದಿನಾಂಕ 24-10-2026ರಂದು ಮಧ್ಯಾಹ್ನ ಸುಮಾರು 3:30ರಿಂದ 4:00 ಗಂಟೆಯ ಸಮಯದಲ್ಲಿ, ಮಹಮ್ಮದ್ ಗೌಸ್ ಖಾನ್ ಅವರು ತಮ್ಮ ಪತ್ನಿ ಫಾತಿಮಾ ಬೀ ಜೊತೆ ಸ್ಕೂಟರಿನಲ್ಲಿ (KA 18 EP 5621) ತೇಗೂರು ಗ್ರಾಮದ ಮೂಲಕ ಚಿಕ್ಕಮಗಳೂರಿಗೆ ಬರುತ್ತಿದ್ದರು. ಆ ಸಂದರ್ಭದಲ್ಲಿ ಟ್ರಾಕ್ಟರ್ಗೆ ಟಿಂಬರ್ (ಮರ)ಗಳನ್ನು ಎಳೆದು ಲೋಡ್ ಮಾಡಲು ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಕಟ್ಟಲಾಗಿತ್ತು. ಟ್ರಾಕ್ಟರ್ ಚಾಲಕನ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದಾಗಿ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ದಾರಿಯಲ್ಲಿ ಬರುತ್ತಿದ್ದ ಸವಾರನ ಕುತ್ತಿಗೆಗೆ ತಗುಲಿದೆ.
ಹಗ್ಗ ಕುತ್ತಿಗೆಗೆ ಬಲವಾಗಿ ಸಿಲುಕಿದ್ದರಿಂದ ಸ್ಕೂಟರ್ ಸಮೇತ ರಸ್ತೆ ಮೇಲೆ ಬಿದ್ದು, ಸವಾರ ಮಹಮ್ಮದ್ ಗೌಸ್ ಖಾನ್ ಹಾಗೂ ಅವರ ಪತ್ನಿಗೆ ತಲೆ, ಕುತ್ತಿಗೆ, ಮುಖ ಹಾಗೂ ಕಾಲು-ಕೈಗಳಿಗೆ ತೀವ್ರ ರಕ್ತಗಾಯಗಳಾಗಿವೆ. ತಕ್ಷಣವೇ ಅವರ ಹಿಂದೆಯೇ ಬೈಕ್ನಲ್ಲಿ ಬರುತ್ತಿದ್ದ ಅವರ ಭಾವಮೈದುನ ಸಿಖಂದರ್ ಖಾನ್ ಅವರು ಇಬ್ಬರನ್ನೂ ಉಪಚರಿಸಿ, ಆಟೋ ಮೂಲಕ ಚಿಕ್ಕಮಗಳೂರು ಎಂ.ಜಿ. ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮಹಮ್ಮದ್ ಗೌಸ್ ಖಾನ್ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಅಪಘಾತಕ್ಕೆ ಕಾರಣವಾದ ಟ್ರಾಕ್ಟರ್ ಚಾಲಕ ಹಾಗೂ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತರ ಪತ್ನಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.




























