ದಟ್ಟ ಅಮೇಜಾನ್ ಕಾಡಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು 40 ದಿನಗಳ ನಂತರ ಪತ್ತೆ!: ಇವರನ್ನು ಪತ್ತೆ ಹಚ್ಚಿದ್ದು ಹೇಗೆ ? - Mahanayaka

ದಟ್ಟ ಅಮೇಜಾನ್ ಕಾಡಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು 40 ದಿನಗಳ ನಂತರ ಪತ್ತೆ!: ಇವರನ್ನು ಪತ್ತೆ ಹಚ್ಚಿದ್ದು ಹೇಗೆ ?

amezon
10/06/2023

ಬೊಗೋಟಾ: ಅಮೆಜಾನ್ ಕಾಡು ಅಂದ್ರೆ ಸಾಕು ಜನ ಬೆಚ್ಚಿ ಬೀಳುತ್ತಾರೆ. ಅಂತಹ ಕಾಡಿನಲ್ಲಿ ಬರೋಬ್ಬರಿ 40 ದಿನಗಳ ಕಾಲ ಸಿಲುಕಿದ ನಾಲ್ವರು ಮಕ್ಕಳು ಇದೀಗ ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದು, ಇವರನ್ನು ಸೈನಿಕರು ಹುಡುಕಾಡಿದ್ದು, ಭಾರೀ ಸಾಹಸವಾಗಿದೆ.

40 ದಿನಗಳ ಹಿಂದೆ:

ಅಂದು ಶುಕ್ರವಾರ, ತಡ ರಾತ್ರಿ ವೇಳೆ ಸಣ್ಣ ವಿಮಾನವೊಂದು ಸ್ಯಾನ್ ಜೋಸ್ ಗುವಿಯಾರ್ ಪಟ್ಟಣಕ್ಕೆ 350 ಕಿ.ಮೀ. ದೂರದ ಪ್ರಯಾಣಕ್ಕಾಗಿ ಅರರಾಕುರ ಎಂಬ ಪ್ರದೇಶದ ಕಾಡಿನ ಪ್ರದೇಶದಿಂದ ಟೇಕ್ ಆಫ್ ಆಗಿತ್ತು. ವಿಮಾನದಲ್ಲಿ ಒಬ್ಬರು ತಾಯಿ ಅವರ ನಾಲ್ವರು ಮಕ್ಕಳು, ಪೈಲಟ್ ಹಾಗೂ ಸ್ಥಳೀಯ ನಾಯಕರೊಬ್ಬರು ಇದ್ದರು. ಟೇಕ್ ಆಫ್ ಆದ ವಿಮಾನ ಕೆಲವೇ ನಿಮಿಷಗಳ ನಂತರ ಕೊಲಂಬಿಯಾದ ಅಮೇಜಾನ್ ಕಾಡಿನ ಎತ್ತರದ ಮರಗಳ ಮೇಲೆ ಸುಳಿದಾಡಿ ಕೆಲವೇ ಕ್ಷಣಗಳಲ್ಲಿ ಮರೆಯಾಗಿತ್ತು. ಈ ಮಾಹಿತಿ ರಕ್ಷಣಾ ಸಚಿವಾಲಯಕ್ಕೆ ದೊರೆತಿತ್ತು.

ಅಮೇಜಾನ್ ಕಾಡಿನ ಮೇಲೆ ಹಾರುತ್ತಿದ್ದ ವೇಳೆ ಆ ಮಿನಿ ವಿಮಾನವು ಪತನವಾಗಿತ್ತು. ವಿಮಾನ ಪತನದ ವೇಳೆ ಮಕ್ಕಳ ತಾಯಿ, ಪೈಲೆಟ್ ಹಾಗೂ ಸ್ಥಳೀಯ ನಾಯಕ ಸಾವನ್ನಪ್ಪಿದ್ದರೆ, ಇತ್ತ ನಾಲ್ವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು.

ಹದಿಮೂರು, ಒಂಬತ್ತು, ನಾಲ್ಕು ಮತ್ತು ಒಂದು ವರ್ಷ ವಯಸ್ಸಿನ ಮಕ್ಕಳು ದಟ್ಟ ಕಾಡಿನಲ್ಲಿ ಸಿಲುಕಿದ್ದರು. ಈ ಮಕ್ಕಳು ಸಿಲುಕಿದ್ದ ಪ್ರದೇಶ ಅಂತಿಂಥ ಪ್ರದೇಶವಲ್ಲ, ಜಾಗ್ವಾರ್, ಅಪಾಯಕಾರಿ ಹಾವುಗಳು ಮತ್ತು ಮಾಂಸ ಭಕ್ಷ್ಯಕ ಪ್ರಾಣಿಗಳ ನೆಲೆ ಇದಾಗಿದೆ. ಜೊತೆಗೆ ಶಸ್ತ್ರ ಸಜ್ಜಿತ ಮಾದಕ ವಸ್ತು ಕಳ್ಳಸಾಗಣೆಯ ಗುಂಪುಗಳ ನೆಲೆ ಕೂಡ ಇದಾಗಿದೆ.

ಅತ್ತ ಅಮೇಜಾನ್ ಕಾಡಿನಲ್ಲಿ ಪತನಗೊಂಡ ಮಾಹಿತಿ ಪಡೆದು ರಕ್ಷಣಾ ಇಲಾಖೆ, ವಿಮಾನದಲ್ಲಿದ್ದವರ ರಕ್ಷಣೆಗೆ ಮುಂದಾಗಿದೆ. ಸುಮಾರು 160 ಸೈನಿಕರು ಹಾಗೂ ಈ ಕಾಡಿನ ಬಗ್ಗೆ ನಿಕಟ ಜ್ಞಾನ ಹೊಂದಿರುವ 70 ಸ್ಥಳೀಯರು ಹುಡುಕಾಟ ಆರಂಭಿಸಿದ್ದರು.

ಇನ್ನೊಂದೆಡೆಯಲ್ಲಿ ನಾಪತ್ತೆಯಾದ ಮಕ್ಕಳು ಕಾಡಿನಲ್ಲಿ ಸಿಕ್ಕಿದ ಹಣ್ಣು ಹಂಪಲುಗಳನ್ನು ತಿನ್ನುತ್ತಾ, ಕಾಡಿನಿಂದ ಹೊರ ಬರಲು ದಾರಿ ಹುಡುಕಾಡುತ್ತಿದ್ದರು. ಮಕ್ಕಳನ್ನು ಪತ್ತೆ ಹಚ್ಚಲು ವಾಯು ಪಡೆಯು, ಮಕ್ಕಳ ಸ್ವಂತ ಭಾಷೆ ಸ್ಪ್ಯಾನಿಷ್ ಭಾಷೆಯಲ್ಲಿ ಆಡಿಯೋ ಪ್ಲೇಯರ್ ಗಳನ್ನು ಕಾಡಿನೊಳಗೆ ಎಸೆದರು. ಆ ಆಡಿಯೋದಲ್ಲಿ ಮಕ್ಕಳ ಅಜ್ಜಿಯ ಧ್ವನಿಯನ್ನು ಪ್ಲೇ ಮಾಡಲಾಗುತ್ತಿತ್ತು. ಕಾಡಿನೊಳಗೆ ಸುಮಾರು 10 ಸಾವಿರ ಆಡಿಯೋ ಪ್ಲೇಯರ್ ಗಳನ್ನು ಎಸೆಯಲಾಗಿತ್ತು.

ಮೊದಲು ವಿಮಾನವನ್ನು ಪತ್ತೆ ಹಚ್ಚಲಾಯಿತು. ವಿಮಾನವು ಮರದ ಮೇಲೆ ಸಿಲುಕಿಕೊಂಡಿತ್ತು. ಆ ಸ್ಥಳದಲ್ಲಿ ಮಕ್ಕಳ ತಾಯಿ, ವಿಮಾನದ ಪೈಲೆಟ್ ಹಾಗೂ ಸ್ಥಳೀಯ ನಾಯಕನ ಮೃತದೇಹ ಪತ್ತೆಯಾಗಿತ್ತು. ಮಕ್ಕಳು ನಾಪತ್ತೆಯಾಗಿರುವುದರಿಂದಾಗಿ ಮಕ್ಕಳು ಬದುಕಿರುವುದು ಸ್ಪಷ್ಟವಾಯಿತು.

ವಿಮಾನ ಅಪಘಾತದವಾದ ಸ್ಥಳದಿಂದ ಕೆಲವು ದೂರಗಳ ಅಂತರದಲ್ಲಿ, ಮಕ್ಕಳ ಹೆಜ್ಜೆ ಗುರುತುಗಳು, ಅರ್ಧ ತಿಂದು ಎಸೆದ ಹಣ್ಣುಗಳು, ನೀರಿನ ಬಾಟಲಿಗಳು, ಮಗುವಿನ ಡೈಪರ್ ಗಳು ಮಕ್ಕಳ ಸುಳಿವು ನೀಡಿತ್ತು. ಕೊನೆಗೂ ಅಪಘಾತ ನಡೆದ ಪಶ್ಚಿಮ ಪ್ರದೇಶದ 5 ಕಿ.ಮೀ. ದೂರದಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ