ಲಾರಿ ಡಿಕ್ಕಿಯಾಗಿ ಸಿಐಎಸ್ ಎಫ್ ಯೋಧ ಸ್ಥಳದಲ್ಲೇ ದುರ್ಮರಣ
ದಾಬಸ್ ಪೇಟೆ (ನೆಲಮಂಗಲ): ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಾಬಸ್ಪೇಟೆಯ ಲಕ್ಕೂರು ಬಳಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ ಚಕ್ರಕ್ಕೆ ಸಿಲುಕಿ ಸಿಐಎಸ್ಎಫ್ (CISF) ಯೋಧರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಪಂಜಾಬ್ ಮೂಲದ ಪ್ರಿನ್ಸಿಪಲ್ ಸಿಂಗ್ (35) ಎಂದು ಗುರುತಿಸಲಾಗಿದೆ. ಇವರು ದಾಬಸ್ಪೇಟೆಯ ಸಿಐಎಸ್ಎಫ್ ಕ್ವಾಟ್ರಸ್ನಲ್ಲಿ ವಾಸವಾಗಿದ್ದು, ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಇಲಾಖೆಗೆ ಹಾಗೂ ಮಿಲಿಟರಿ ಕ್ವಾಟ್ರಸ್ ಗೆ ಅಗತ್ಯವಿದ್ದ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ತರಲು ಪ್ರಿನ್ಸಿಪಲ್ ಸಿಂಗ್ ಅವರು ಬೈಕ್ ನಲ್ಲಿ ದಾಬಸ್ ಪೇಟೆಗೆ ತೆರಳುತ್ತಿದ್ದರು. ಈ ವೇಳೆ ದಾಬಸ್ ಪೇಟೆ ತಾಲೂಕಿನ ಲಕ್ಕೂರು ಬಳಿ ವೇಗವಾಗಿ ಬಂದ ಲಾರಿಯೊಂದು ಬೈಕ್ ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಯೋಧ ಬೈಕ್ ನಿಂದ ಕೆಳಗೆ ಬಿದ್ದು, ಲಾರಿಯ ಚಕ್ರಕ್ಕೆ ಸಿಲುಕಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




























