ದ.ಕ., ಉಡುಪಿ ಸಮಾನ ಮನಸ್ಕರ ಸಭೆ: ವೈದ್ಯರ ಸಂಘದ ನಡೆಗೆ ಖಂಡನೆ, ಕರಾವಳಿ ಸೌಹಾರ್ದತೆ ಬಗ್ಗೆ ಚರ್ಚೆ

ಮುಲ್ಕಿ: ಭಾರತ ವೈದ್ಯರ ಸಂಘ (ಐಎಂಎ) ಪುತ್ತೂರು ಘಟಕದ ಮತೀಯ ತಾರತಮ್ಯದ ನಡೆ, ಮುನೀರ್ ಕಾಟಿಪಳ್ಳ, ಹಾಗೂ ಅಬ್ದುಸ್ಸಲಾಂ ಪುತ್ತಿಗೆ ಮೇಲೆ ಮೊಕದ್ದಮೆ ದಾಖಲಿಸಿರುವ ಪ್ರಕರಣ ಹಾಗೂ ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಕೊಲೆ, ಕೋಮು ಸಂಘರ್ಷದ ಬೆಳವಣಿಗೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಮುಲ್ಕಿ ಪಟ್ಟಣದ ಖಾಸಗಿ ಹೊಟೇಲ್ ನ ಸಭಾಂಗಣದಲ್ಲಿ ಸಭೆ ನಡೆಸಿದರು.
ಸಭೆಯ ಕೊನೆಯಲ್ಲಿ ಕೋಮುವಾದದ ರಾಜಕಾರಣವನ್ನು ಬಯಲುಗೊಳಿಸುವ ನಿಟ್ಟಿನಲ್ಲಿ ಎರಡು ಪ್ರಮುಖ ಠರಾವುಗಳನ್ನು ಅಂಗೀಕರಿಸಲಾಯಿತು.
ವೈದ್ಯರ ಸಂಘದ ಮಂಗಳೂರು ಘಟಕದ ಬೆಂಬಲದೊಂದಿಗೆ ವೈದ್ಯರ ಸಂಘದ ಪುತ್ತೂರು ಘಟಕವು ಮುಸ್ಲಿಂ ಕುಟುಂಬವೊಂದರ ಜೊತೆಗಿನ ಸರಕಾರಿ ವೈದ್ಯರ ವಾಗ್ವಾದಕ್ಕೆ ಧರ್ಮದ ಗುರುತನ್ನು ಆರೋಪಿಸಿರುವುದು, ಕೋಮುವಾದಿ ಹಿನ್ನಲೆಯ ಸಂಘ ಪರಿವಾರದ ಪ್ರಮುಖರ ಜೊತೆ ಸೇರಿ ಪ್ರತಿಭಟನೆ ನಡೆಸಿರುವುದು, ಆ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಕ್ಕೆ ಅವಕಾಶ ಒದಗಿಸಿರುವುದನ್ನು ಸಮಾನ ಮನಸ್ಕರ ಸಭೆ ಆಘಾತಕಾರಿ ವಿದ್ಯಾಮಾನ ಎಂದು ಬಣ್ಣಿಸಿತು. ವೈದ್ಯರ ಸಂಘದ ಈ ನಡೆ ವೈದ್ಯರ ಸಂಘದ ಕೋಮುವಾದಿ ಮನಸ್ಥಿತಿಯನ್ನು ಜಾಹೀರು ಪಡಿಸಿದೆ. ಈ ನಡೆಯನ್ನು ಖಂಡಿಸಿದ ಮುನೀರ್ ಕಾಟಿಪಳ್ಳ ಹಾಗೂ ಪ್ರಕಟಿಸಿದ ಮಾಧ್ಯಮದ ಸಂಪಾದಕ ಪುತ್ತಿಗೆ ಯವರ ಮೇಲೆ ಸುಳ್ಳು ಆರೋಪ ಹೊರಿಸಿ ನ್ಯಾಯಾಲಯದ ಮೂಲಕ ಮೊಕದ್ದಮೆ ದಾಖಲಿಸಿರುವುದು ವೈದ್ಯ ವೃತ್ತಿಗೇ ಕಳಂಕ ತರುವ ವಿದ್ಯಾಮಾನ, ಭಾರತ ವೈದ್ಯರ ಸಂಘ (ಐಎಂಎ) ಪುತ್ತೂರು ಹಾಗೂ ಮಂಗಳೂರು ಘಟಕದ ಈ ವರ್ತನೆ, ಜನಪರ ಧ್ವನಿಗಳನ್ನು ಹತ್ತಿಕ್ಕುವ ಯತ್ನದ ವಿರುದ್ದ ಕಾನೂನಾತ್ಮಕ ಹಾಗೂ ಬೀದಿ ಹೋರಾಟದ ಮೂಲಕ ಎದುರಿಸಲಾಗುವುದು ಎಂಬ ಒಮ್ಮತದ ಅಭಿಪ್ರಾಯಕ್ಕೆ ಬಂದ ಸಭೆಯು ಜೂನ್ ಎರಡನೇ ವಾರದಲ್ಲಿ ಮಂಗಳೂರು ನಗರದಲ್ಲಿ ಪ್ರತಿಭಟನಾ ಸಭೆ ನಡೆಸಿ ತಪ್ಪಿತಸ್ಥ ವೈದ್ಯರು ಹಾಗೂ ಸಂಘದ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸರಕಾರಕ್ಕೆ ಮನವಿ ಸಲ್ಲಿಸುವುದು ಎಂದು ತೀರ್ಮಾನಿಸಿತು.
ಹಾಗೆಯೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ಶಾಸಕರುಗಳ ದ್ವೇಷ ಭಾಷಣ, ಕೋಮು ಧ್ರುವೀಕರಣವನ್ನು ಆಳಗೊಳಿಸಲು ಅದು ನಡೆಸುತ್ತಿರುವ ಹಿಂಸಾತ್ಮಕ ಪ್ರಯತ್ನಗಳ ಕುರಿತು ಸಭೆಯಲ್ಲಿ ವಿಸ್ತಾರವಾದ ಚರ್ಚೆ ನಡೆಯಿತು. ಈ ರಾಜಕಾರಣದ ಭಾಗವಾಗಿ ನಡೆದ ಭೀಕರ ಕೊಲೆಗಳು, ಅದರ ಸಾಮಾಜಿಕ ಪರಿಣಾಮಗಳ ಕುರಿತು ಸೇರಿದ ಪ್ರಮುಖರು ಕಳವಳ ವ್ಯಕ್ತಪಡಿಸಿದರು, ಇಂತಹ ಪರಿಸ್ಥಿತಿ ಎದುರಿಸುವಲ್ಲಿ ಸರಕಾರದ ವೈಫಲ್ಯ, ಮೃದು ಧೋರಣೆಗಳು ಚರ್ಚೆಗೆ ಒಳಪಟ್ಟವು. ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿರುವ ಕೋಮುವಾದಿ ಕೃತ್ಯ, ದ್ವೇಷ ಭಾಷಣ ಗಳು ಸಮಾಜವನ್ನು ಆಳವಾಗಿ ವಿಭಜಿಸಿದ್ದು, ಸಮುದಾಯಗಳ ನಡುವೆ ಅಪನಂಬಿಕೆಗಳು ತೀವ್ರವಾಗಿದೆ. ಇಂತಹ ಕೋಮು ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಲು, ಸಾಮರಸ್ಯವನ್ನು ಬಲಗೊಳಿಸಲು ಎಲ್ಲಾ ಜನಪರ, ಜಾತ್ಯಾತೀತ ಶಕ್ತಿಗಳು ಬಿನ್ನಾಭಿಪ್ರಾಯಗಳ ಆಚೆಗೆ ಒಂದಾಗಿ ಶ್ರಮಿಸಲು, ಒಗ್ಗಟ್ಟಿನಲ್ಲಿ ದುಡಿಯಲು ಸಭೆ ನಿರ್ಣಯವನ್ನು ಕೈಗೊಂಡಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಜನತೆಯನ್ನು ನೇರವಾಗಿ ತಲುಪುವ ನಿಟ್ಟಿನಲ್ಲಿ ಹಲವು ಹಂತದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಹಬಾಳ್ವೆ ಉಡುಪಿ ಇದರ ಸಂಚಾಲಕರಾದ ಅಮೃತ್ ಶೆಣೈ ವಹಿಸಿದ್ದರು. ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಯಶವಂತ ಮರೋಳಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ, ಸಿಪಿಐ ದ.ಕ. ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಎಂ ಜಿ ಹೆಗ್ಡೆ, ವಿವಿದ ದಲಿತ ಸಂಘಟನೆಗಳ ಪ್ರಮುಖರಾದ ಎಂ ದೇವದಾಸ್, ಶೇಖರ ಹೆಜಮಾಡಿ, ರಘು ಎಕ್ಕಾರು, ಮುಸ್ಲಿಂ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಮಾಜಿ ಮೇಯರ್ ಕೆ ಅಶ್ರಫ್, ಉಪಾಧ್ಯಕ್ಷರಾದ ಸಾಲಿ ಮರವೂರು, ಉಡುಪಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲಾ, ಪದಾಧಿಕಾರಿಗಳಾದ ಇದ್ರಿಸ್ ಹೂಡೆ, ಪೀರ್ ಸಾಹೇಬ್, ಮುಸ್ಲಿಂ ಐಕ್ಯತಾ ವೇದಿಕೆಯ ಅಶ್ರಫ್ ಬದ್ರಿಯಾ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಆದಿವಾಸಿ ಹಕ್ಕುಗಳ ಸಮಿತಿಯ ಡಾ. ಕೃಷ್ಣಪ್ಪ ಕೊಂಚಾಡಿ, ಕಾರ್ಮಿಕ ಮುಂದಾಳುಗಳಾದ ಸುನಿಲ್ ಕುಮಾರ್ ಬಜಾಲ್, ಕರುಣಾಕರ ಮಾರಿಪಳ್ಳ, ಯೋಗೀಶ್, ಡಿವೈಎಫ್ಐ ಪ್ರಮುಖರಾದ ಸಂತೋಷ್ ಬಜಾಲ್, ಬಿ ಕೆ ಇಮ್ತಿಯಾಜ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ವಿವಿಧ ಸಂಘಟನೆಗಳ ಪ್ರಮುಖರಾದ ರಮೇಶ್ ತಿಂಗಳಾಯ ಉಡುಪಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮಹಾಬಲ ಕುಂದರ್, ಶ್ರೀನಾಥ್ ಕುಲಾಲ್, ಹರೀಶ್ ಪೇಜಾವರ, ಕೃಷ್ಣಾನಂದ ಡಿ ಎಸ್,ಬಾವಾ ಪದರಂಗಿ, ಶಿರಾಜ್ ಬಜ್ಪೆ ಹಮೀದ್ ಪಡುಬಿದ್ರೆ, ಸಂತೋಷ್ ಹೆಜಮಾಡಿ, ಸಮರ್ಥ್ ಭಟ್, ನೀನಾ ಟೆಲ್ಲಿಸ್ ಸೇರಿದಂತೆ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: